ದಾವಣಗೆರೆ: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಾಜಿರಾವ್ ಜಾಧವ್ ಮನೆಗೆ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಭೇಟಿಗೆ ಆಗಮಿಸಿದ್ದರು, ಆದರೆ ಸಿಸಿಬಿ ಅಧಿಕಾರಿಗಳು ಆರೋಪಿಯೊಂದಿಗೆ ಮಹಜರು ನಡೆಸುತ್ತಿದ್ದರಿಂದ ಎಂಪಿ ರೇಣುಕಾಚಾರ್ಯ ಅವರನ್ನು ಮನೆಯೊಳಗೆ ಬಿಡದೇ ವಾಪಸ್ ಕಳುಹಿಸಿರುವ ಪ್ರಸಂಗ ನಡೆಯಿತು.
ದಾವಣಗೆರೆಯ ಈಡ್ಲ್ಯೂಎಸ್ ಕಾಲೊನಿಯ ಶಿವಾಜಿರಾವ್ ಜಾಧವ್ ನಿವಾಸದ ಬಳಿ ಇದಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಶಿವಾಜಿ ರಾವ್ ಜಾಧವ್ ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಬರೆದಿದ್ದು ತಪ್ಪು, ಅದನ್ನು ಕ್ಷಮಿಸಬೇಕು ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಹಿಂದು ಜಾಗರಣ ವೇದಿಕೆ ಮುಖಂಡ ಶಿವಾಜಿರಾವ್ ಜಾಧವ್ ಅವರನ್ನು ಸಿಸಿಬಿಯವರು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿಯಿತು. ಯಾವ ಕಾರಣಕ್ಕೆ ಬಂಧಿಸಿದ್ದೀರಿ ಎಂದು ಕೇಳಲು ಅವರ ಮನೆಗೆ ಬಂದಿದ್ದೇನೆ. ಆದರೆ ಸಿಸಿಬಿಯವರು ಅವರ ಕರ್ತವ್ಯ ಮಾಡ್ತಿದ್ದಾರೆ. ವಿಚಾರ ನಡೆಸುವ ವೇಳೆ ಅವರ ಮನೆ ಪ್ರವೇಶ ಮಾಡುವುದು ತಪ್ಪು ಅದಕ್ಕೆ ಹೋಗಲಿಲ್ಲ ಎಂದು ಹೇಳಿದರು.
ನಾನು ಅಲ್ಪಸಂಖ್ಯಾತರ ವಿರುದ್ಧ ಮಾತನಾಡುವುದಿಲ್ಲ, ಕೆಲವರು ಅಲ್ಪಸಂಖ್ಯಾತರು ಕೋಮುವಾದ ಸೃಷ್ಟಿ ಮಾಡ್ತಾರೆ. ಎಷ್ಟು ಕಡೆ ಹಿಂದುಗಳ ಹತ್ಯೆಯಾಗಿದೆ. ಭಾರತದಲ್ಲಿ ನಾವೆಲ್ಲರೂ ಹುಟ್ಟಿದ ಮೇಲೆ ಹಿಂದು ಮುಸ್ಲಿಂ ಕ್ರೈಸ್ತರು ಎಲ್ಲರೂ ಒಂದೇ. ಮೇಲು ಕೀಳು ಎಂದು ಭಾವಿಸುವುದಿಲ್ಲ, ಆದರೆ ಹಿಂದುಗಳಿಗೆ ರಕ್ಷಣೆ ಇಲ್ಲ ಅಂದರೆ ಬಹಳ ಕಷ್ಟವಾಗುತ್ತದೆ ಎಂದರು.
ಇನ್ನು ಶಿವಾಜಿ ರಾವ್ ಜಾಧವ್ ಸಾಹಿತಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಅದು ಏನು, ಯಾವುದಕ್ಕೆ ಬರೆದಿದ್ದಾರೆ ಎಂಬ ಮಾಹಿತಿ ಇಲ್ಲ, ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದರೆ ಅದು ತಪ್ಪು. ಆದರೆ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಇನ್ಮುಂದೆ ಇಂಥವೂ ಮಾಡಬಾರದು ಎಂದು ಆತನಿಗೆ ಕ್ಷಮೆ ನೀಡಬೇಕು. ಅದೇ ಅಲ್ಪಸಂಖ್ಯಾತರು ಬೇಕಾದಷ್ಟು ಮಾಡ್ತಿದ್ದಾರೆ, ಅವರಿಗೆ ಸರ್ಕಾರಗಳು ಸಾಥ್ ಕೊಡ್ತಿವೆ ಎಂದು ಸ್ಪಷ್ಟನೆ ನೀಡಿದರು.
ಲಿಂಗಾಯತ ಅಧಿಕಾರಿಗಳು ಮೂಲೆಗುಂಪು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವೀರಶ್ವೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅಧಿಕಾರಿಗಳು ಮೂಲೆಗುಂಪು ಆಗ್ತಿದ್ದಾರೆ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಶಾಸಕ ಯತ್ನಾಳ್ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆಸಿ, ನಾವೆಲ್ಲಾ ಜಾತ್ಯತೀತ ರಾಷ್ಟ್ರದಲ್ಲಿ ಜೀವಿಸುತ್ತಿರುವವರು, ಶಾಮನೂರು ಶಿವಶಂಕರಪ್ಪ ಹಿರಿಯರು ಅವರಿಗೆ ಇರುವ ಅನುಭವದಿಂದ ಈ ಮಾತನ್ನು ಆಡಿದ್ದಾರೆ. ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಪೋಸ್ಟಿಂಗ್ ಕೊಡಲಿಲ್ಲ ಎಂಬ ಹೇಳಿಕೆ ಸ್ವಾಗತಿಸುತ್ತೇನೆ. ಅದಕ್ಕೆ ಸಂಪೂರ್ಣವಾದ ಬೆಂಬಲ ಕೋರುತ್ತೇನೆ ಹಾಗೂ ಬೆಂಬಲ ಸೂಚಿಸುತ್ತೇನೆ ಎಂದು ಹೇಳಿದರು.
ಇದನ್ನೂಓದಿ:ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಆರೋಪ: ಬಂಧಿತನ ಸಹೋದರ ಹೇಳಿದ್ದೇನು?