ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿಯಲ್ಲಿ ಚಿರತೆ ಕಂಡುಬಂದಿದ್ದು, ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ. ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಬೋನ್ ಅಳವಡಿಸಿದ್ದಾರೆ. ಆರ್ಎಫ್ಒ ಚೇತನ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಯುತ್ತಿದೆ.
ಇದೇ ವೇಳೆ, ಜನರು ಏಕಾಂಗಿಯಾಗಿ ಜಮೀನುಗಳಿಗೆ ಹೋಗದಂತೆ ಇಲಾಖೆ ಮನವಿ ಮಾಡಿದೆ. ಚಿರತೆ ಚಲನವಲನ ಕಂಡುಬಂದರೆ ಮಾಹಿತಿ ನೀಡುವಂತೆ ಜನರಲ್ಲಿ ವಿನಂತಿಸಲಾಗಿದೆ. ಬೋನಿನಲ್ಲಿ ನಾಯಿಯನ್ನಿರಿಸಿ ಕಾಯುತ್ತಿರುವ ಸಿಬ್ಬಂದಿಗೆ ಗ್ರಾಮಸ್ಥರು ಸಾಥ್ ನೀಡುತ್ತಿದ್ದಾರೆ.
ಈ ಹಿಂದೆ ಫಲವನಹಳ್ಳಿ ಗ್ರಾಮದ ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು. ಹೀಗಾಗಿ, ನ್ಯಾಮತಿ ತಾಲೂಕಿನ ಮುಸ್ಸೇನಾಳ್, ಸೋಗಿಲು, ಚಟ್ನಹಳ್ಳಿ, ಯರಮಡ ಕ್ಯಾಂಪ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಸೂಚಿಸಿದೆ.
ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ: ಕಬ್ಬಿನ ಗದ್ದೆಯೊಂದರಲ್ಲಿ ಕಬ್ಬು ಬೆಳೆ ಕಟಾವಿನ ವೇಳೆ ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ಘಟನೆ ಟಿ.ನರಸೀಪುರ ತಾಲೂಕಿನ ಗುಡ್ಡದ ಕೊಪ್ಪಲು ಗ್ರಾಮದಲ್ಲಿ ನಡೆದಿತ್ತು. ಕಟಾವಿಗೆ ಬಂದಿದ್ದ ಕೂಲಿ ಕಾರ್ಮಿಕರು ಮರಿಗಳನ್ನು ರಕ್ಷಣೆ ಮಾಡಿದ್ದರು. ಟಿ.ನರಸೀಪುರ ತಾಲೂಕಿನ ಗುಡ್ಡದ ಕೊಪ್ಪಲು ಗ್ರಾಮದಲ್ಲಿ, ದೊರೆಸ್ವಾಮಿ ಎಂಬವರ ಜಮೀನಿನಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದವು. ಚಿರತೆ ಮರಿಗಳನ್ನು ಕಬ್ಬು ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕರು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.
ಚಿರತೆ ದಾಳಿಗೆ ರೈತ ಮಹಿಳೆ ಸಾವು: ಇತ್ತೀಚಿಗೆ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ಶಿವಮೊಗ್ಗ ತಾಲೂಕು ಬಿಕ್ಕೋನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಯಶೋದಮ್ಮ (45) ಚಿರತೆ ದಾಳಿಯಿಂದ ಸಾವನ್ನಪ್ಪಿದ್ದರು. ಮೃತ ರೈತ ಮಹಿಳೆ ಕೂಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಕೆಲಸಕ್ಕೆಂದು ಹೊಲಕ್ಕೆ ಹೋದಾಗ ಘಟನೆ ಸಂಭವಿಸಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇನ್ನಿತರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಅರಣ್ಯ ಇಲಾಖೆ 15 ಲಕ್ಷ ರೂ. ಪರಿಹಾರ ಘೋಷಿಸಿತ್ತು.
ಇದನ್ನೂ ಓದಿ: ತಿರುಮಲ: ಆರು ವರ್ಷದ ಮಗು ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ