ದಾವಣಗೆರೆ: ಧಾರ್ಮಿಕ ದತ್ತಿ ಇಲಾಖೆಯಿಂದ ಆಯೋಜಿಸಲಾಗಿರುವ ’ಸಪ್ತಪದಿ’ ಸಾಮೂಹಿಕ ವಿವಾಹವನ್ನು ತಮ್ಮ ಕುಟುಂಬದ ಮಕ್ಕಳ ಮದುವೆಯಂತೆ ಅಚ್ಚುಕಟ್ಟಾಗಿ ನಡೆಸುವ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಶಸ್ವಿಗೊಳಿಸಬೇಕು ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ ಮಾಡಿದರು.
ಧಾರ್ಮಿಕ ದತ್ತಿ ಇಲಾಖೆಯು ರಾಜ್ಯಾದ್ಯಂತ ಪ್ರವರ್ಗ ಎ ಶ್ರೇಣಿ ದೇವಸ್ಥಾನಗಳಲ್ಲಿ ಹಮ್ಮಿಕೊಳ್ಳಲಾಗಿರುವ ಸಪ್ತಪದಿ ಸಾಮೂಹಿಕ ವಿವಾಹದ ಕುರಿತು ನಡೆಸಲಾದ ಪೂರ್ವಸಿದ್ಧತಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಮೊದಲನೇ ಹಂತದ ಸಪ್ತಪದಿ ಸಾಮೂಹಿಕ ವಿವಾಹವನ್ನು ಶ್ರೇಷ್ಠ ಮುಹೂರ್ತ ಏ. 26 ರಂದು ನಡೆಸಲು ನಿರ್ಧರಿಸಲಾಗಿದೆ. ಮಾ. 27 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಎರಡನೇ ಹಂತದ ಸಾಮೂಹಿಕ ವಿವಾಹವನ್ನು ಮೇ .24 ರಂದು ನಡೆಸಲಾಗುವುದು ಎಂದರು.
ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಪ್ರವರ್ಗ ಎ ಶ್ರೇಣಿ ದೇವಾಲಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುವಂತೆ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿವಾಹ ನೆರವೇರಿಸಲು ನಿರ್ಧರಿಸಲಾಗಿದೆ. ಆದರೆ, ಕೆಲವು ತಾಲೂಕುಗಳಲ್ಲಿ ಎ ಶ್ರೇಣಿಯ ದೇವಸ್ಥಾನಗಳು ಇಲ್ಲದ ಕಾರಣ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರು ಮತ್ತು ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ, ತಾಲೂಕುಗಳ ಬಿ ಮತ್ತು ಸಿ ಶ್ರೇಣಿಯ ದೇವಸ್ಥಾನಗಳನ್ನು ಆಯ್ಕೆ ಮಾಡಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಇಲಾಖೆ ವತಿಯಿಂದ ಇಂತಹ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ಅಗತ್ಯವಾದ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.
ಎಲ್ಲ ಜಿಲ್ಲೆಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹದ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಸಭೆ ನಡೆಸಲಾಗಿದ್ದು, ಸುಮಾರು 15 ಜಿಲ್ಲೆಗಳ ದೇವಾಲಯಗಳಿಂದ ಸಪ್ತಪದಿ ರಥ ಹೊರಟು ಹಳ್ಳಿ ಹಳ್ಳಿಗೆ ಈ ಯೋಜನೆಯ ಪ್ರಚಾರ ಮಾಡಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಸಪ್ತಪದಿ ಸಾಮೂಹಿಕ ವಿವಾಹದ ಲಾಂಛನಕ್ಕೆ ಚಾಲನೆ ನೀಡಿದ್ದು, ಬಹುತೇಕ ಜಿಲ್ಲೆಗಳಲ್ಲಿ ಸಪ್ತಪದಿ ಕುರಿತು ವಿಚಾರ ಸಂಕೀರ್ಣ ನಡೆಸಲಾಗುತ್ತಿದೆ. ಮಾ. 7 ರಂದು ಹುಬ್ಬಳಿ- ಧಾರವಾಡ ಮತ್ತು ಬೆಳಗಾವಿಯಲ್ಲಿ ಕಾರ್ಯಾಗಾರ ನಡೆಸಲಾಗುವುದು ಎಂದು ತಿಳಿಸಿದರು
ಮಠಗಳನ್ನು ಮುಜರಾಯಿ ಇಲಾಖೆಗೆ ಸೇರಿವ ಯೋಚನೆ ಇಲ್ಲ:
ಯಾವುದೇ ಮಠ ಮಂದಿರಗಳನ್ನು ಮುಜರಾಯಿ ಇಲಾಖೆಗೆ ಸೇರಿಸುವ ಯೋಚನೆ ಇಲ್ಲ. ಎಸ್ಸಿ, ಎಸ್ಟಿ ಪೂಜಾರಿಗಳ ನೇಮಕ ಕುರಿತು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ದೇವಸ್ಥಾನಗಳಿಗೆ ಅದರದ್ದೇ ಆದ ಕಟ್ಟುಪಾಡುಗಳು, ಪರಂಪರೆ, ಇರುತ್ತದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಸಾಮಾಜಿಕ ನ್ಯಾಯಕ್ಕೆ ದಕ್ಕೆ ಬಂದಾಗ ಮಾತ್ರ ಸರ್ಕಾರ ಮಧ್ಯ ಪ್ರವೇಶ ಮಾಡುತ್ತೇ ಎಂದರು.
ಬಸನಗೌಡ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಹಿರಿಯ ಬಗ್ಗೆ ನಮಗೆ ಗೌರವ ಇದೆ. ದೊರೆಸ್ವಾಮಿಯವರ ಬಗ್ಗೆ ಏನು ಹೇಳಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.