ದಾವಣಗೆರೆ : ರೈತರ ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋರಾಟ ಹಮ್ಮಿಕೊಂಡಿದೆ. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ಡಿ. 04 ಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳೇ ಉರುಳಿದೆ. ದುರಂತ ಎಂದರೆ ಚುನಾವಣೆ ವೇಳೆ ಕೊಟ್ಟ ಮಾತಿನಂತೆ ನಡೆಯದಿರುವ ಸರ್ಕಾರದ ನಡೆ ಖಂಡನೀಯ ಎಂದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಈ ಸಮಯದಲ್ಲಿ ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳೆವಿಮೆ ಕೊಡಿಸುವ ದಿಕ್ಕಿನಲ್ಲಿ ಯಾವುದೇ ಕಾರ್ಯಕ್ರಮ ನೀಡಿಲ್ಲ. ಬೆಳೆ ರಕ್ಷಣೆ ಯೋಜನೆಗಳಿಲ್ಲ. ಆದರೆ, ಪಂಚರಾಜ್ಯಗಳ ಚುನಾವಣೆ ಇವರಿಗೆ ಮುಖ್ಯವಾಗಿದೆ ಎಂದು ಹರಿಹಾಯ್ದರು.
ಕೃಷಿ ಕಾಯ್ದೆ ವಾಪಸ್ ಪಡೆಯಲಿ : ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ರದ್ದು ಮಾಡುವುದಾಗಿ ಹೇಳಿ, ಈ ವೇಳೆ, ಅಂದು ವಿಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷವರು ರೈತರ ಜೊತೆ ಹೋರಾಟಕ್ಕೆ ಬಂದು ಬೆಂಬಲ ನೀಡಿದ್ದರು. ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗಲಿದೆ ಎಂದಿದ್ದರು. ಇದೀಗ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ. ಆದರೆ, ರೈತರಿಗೆ ನೆರವಾಗುವ ರೀತಿ ನಡೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಷರತ್ತು ಹಾಕಿದರು. ಕೃಷಿ ಕಾಯ್ದೆ ವಾಪಸ್ ಪಡೆಯಬೇಕು, ಬರಗಾಲದ ತುರ್ತು ಕಾರ್ಯಕ್ರಮಗಳು ಜಾರಿಗೆ ತರಬೇಕು. ಸೆಪ್ಟೆಂಬರ್ 22ರ ವಿದ್ಯುತ್ ಕಾಯ್ದೆ ವಾಪಸ್ ಪಡೆಯಬೇಕು. ಕಬ್ಬಿಗೆ ಎಪಿಆರ್ಪಿ ಜೊತೆ ಎಸ್ಎಪಿ ನೀಡಬೇಕು.
ರಾಜ್ಯದ ಕಬ್ಬಿನ ಇಳುವರಿಗೆ ಒಂದು ಕಾರ್ಖಾನೆಯಲ್ಲಿ ಒಂದೊಂದು ಧಾರಣೆ ನಿಲ್ಲಿಸಬೇಕು. ಬಗರ್ ಹುಕುಂ ಸಾಗುವಳಿ ತಕ್ಷಣವೇ ಜಾರಿ ಮಾಡಬೇಕು. ಮಹದಾಯಿ ಹಾಗೂ ಮೇಕೆದಾಟು ಕಾರ್ಯವನ್ನು ಶೀಘ್ರವೇ ಕೈಗೊಳ್ಳಬೇಕು. ರೈತರ ಕೃಷಿ ಪಂಪ್ ಸೆಟ್ಗಳಿಗೆ ಅಕ್ರಮ ಸಕ್ರಮದಡಿ ನೀಡುತ್ತಿದ್ದ ಟ್ರಾನ್ಸ್ ಫಾರಂ, ಕಂಬ, ವೈರ್ ಇತರೆ ಉಪಕರಣಗಳು ನೀಡುವುದನ್ನು ಸರ್ಕಾರ ರದ್ದುಗೊಳಿಸಿದೆ. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಕೃಷಿ ಕಾಯ್ದೆ ವಾಪಸ್ ಪಡೆಯುವ ಧಮ್ ಇದೆಯಾ?: ಕೋಡಿಹಳ್ಳಿ ಚಂದ್ರಶೇಖರ್ ಚಾಲೆಂಜ್