ದಾವಣಗೆರೆ: ಒಂದೆಡೆ ರಣ ಬಿಸಿಲಿನಲ್ಲೂ ಬಿಂದಿಗೆ ಹಿಡಿದು ಕೊಂಕಳಲ್ಲಿ ಮಗು ಕುರಿಸಿಕೊಂಡು ಕಿಲೋಮೀಟರ್ ಗಟ್ಟಲೆ ಹೋಗಿ ನೀರು ತರುವಂತಹ ದಾರುಣ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಡಿಯುವ ನೀರಿಗಾಗಿ ಸಾಕಷ್ಟು ಹಣ ಬಿಡುಗಡೆಯಾದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ.
ಜಿಲ್ಲೆಯ ಜಗಳೂರು ಸೇರಿದಂತೆ ಹಲವೆಡೆ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣವಾಗುತ್ತಿದೆ. ಜನರು ನೀರು ಸಿಗದೇ ಪರದಾಡುತ್ತಿದ್ದಾರೆ. ನೀರು ತರಲು ಕಿಲೋ ಮೀಟರ್ ಗಟ್ಟಲೇ ನಡೆದುಕೊಂಡು ಹೋಗುವ ದುಃಸ್ಥಿತಿ ನಿರ್ಮಾಣವಾಗಿದ್ದು, ಕೆಲಸ ಬಿಟ್ಟು ನೀರು ತರುವುದೇ ಜನರಿಗೆ ದೊಡ್ಡ ಕೆಲಸವಾಗಿದೆ.
ನಗರದಲ್ಲಿ ಹತ್ತು ದಿನಕ್ಕೊಮ್ಮೆ ಮಹಾನಗರ ಪಾಲಿಕೆ ನೀರು ಸರಬರಾಜು ಮಾಡುತ್ತಿದೆ. ಕೆಲವೆಡೆ ವಾರಕ್ಕೊಮ್ಮೆ ನೀರು ಬಿಟ್ಟರೆ, ಮತ್ತೆ ಕೆಲವೆಡೆ ಹದಿನೈದು ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ. ಇದರಿಂದ ಜನರು ಹನಿ ನೀರನ್ನು ಬಳಸಲು ಹತ್ತಾರು ಸಲ ವಿಚಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನೀರು ತರಲು ಕೆಲಸ ಕಾರ್ಯ ಬಿಟ್ಟು ಟಿಬಿ ಸ್ಟೇಷನ್ ಬಳಿಗೆ ಬಂದು ಇಲ್ಲಿ ಸಂಗ್ರಹವಾಗಿರುವ ನೀರು ತುಂಬಿ ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ. ಜಗಳೂರು ತಾಲೂಕು ಒಂದರಲ್ಲಿಯೇ ಸುಮಾರು 40 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಬಂದಿದೆ. ಆದ್ರೆ, ಕೆರೆ ಕಟ್ಟೆಗಳು ಮಾತ್ರ ತುಂಬಿಲ್ಲ. ಈ ಕಾರಣದಿಂದ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಬೋರ್ ವೆಲ್ ಗಳಲ್ಲಿ ನೀರು ಬಂದಿಲ್ಲ.
ಕುಡಿಯುವ ನೀರಿಗಾಗಿ ಜನರು ಅಕ್ಕಪಕ್ಕದ ತೋಟಗಳಿಗೆ ಹೋಗುವಂತಹ ಸ್ಥಿತಿ ಕೂಡ ನಿರ್ಮಾಣವಾಗಿದೆ. ಕೆಲವರಂತೂ ನೀರು ಸಿಗದ ಕಾರಣ ಊರು ಬಿಡಬೇಕು ಎಂಬಷ್ಟರ ಮಟ್ಟಿಗೆ ರೋಸಿ ಹೋಗಿದ್ದಾರೆ. ಇನ್ನೂ ಪ್ರತಿ ಬೇಸಿಗೆಯಲ್ಲಿಯೂ ಇದೇ ಸಮಸ್ಯೆ ಪುನಾರವರ್ತನೆಯಾಗುತ್ತಿದ್ದರೂ ಆಡಳಿತ ವರ್ಗ ಮಾತ್ರ ಶಾಶ್ವತ ನೀರಿನ ಸಮಸ್ಯೆಗೆ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಜನರಿಗೆ ನೀರು ಸಿಗುತ್ತಿಲ್ಲ, ಇನ್ನು ಜಾನುವಾರುಗಳ ಪರಿಸ್ಥಿತಿಯಂತೂ ಹೇಳತೀರದ್ದು. ಸೊಂಟದ ಮೇಲೆ ಮಗುವನ್ನು ಕೂರಿಸಿಕೊಂಡು ತಲೆ ಮೇಲೆ ನೀರಿನ ಬಿಂದಿಗೆ ಹೊತ್ತುಕೊಂಡು ಹೋಗುವ ಮಹಿಳೆಯರ ದೃಶ್ಯ ಎಂತವರ ಕರುಳು ಚುರುಕ್ ಎನಿಸದೇ ಇರದು. ಇನ್ನು ಯುವಕರು ಶಾಲಾ ಕಾಲೇಜು ಬಿಟ್ಟು ನೀರು ತರುವ ಕಾರ್ಯಕ್ಕಿಳಿದಿದ್ದಾರೆ.
ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದೆ, ಆದ್ರೆ, ಅಧಿಕಾರಿಗಳು ಆ ಹಣವನ್ನ ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಿಲ್ಲ. ಆದಷ್ಟು ಬೇಗ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.