ದಾವಣಗೆರೆ: ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ನಗರದ ಕೆ. ಬಿ. ಬಡಾವಣೆ ನಾಲ್ಕನೇ ಕ್ರಾಸ್ ನ ಶ್ರೀ ಬನ್ನಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಸಡಗರ, ಸಂಭ್ರಮದಿಂದ ನೆರವೇರಿತು.
ಕಳೆದ ಏಳು ವರ್ಷಗಳಿಂದಲೂ ವಾಣಿ ನಾಗಭೂಷಣ ಗೆಳೆಯರ ಬಳಗದ ವತಿಯಿಂದ ವಿಜೃಂಭಣೆಯಿಂದ ಕಾರ್ತಿಕೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷವೂ ಮಹಾಕಾಳಮ್ಮ ದೇವಿಗೆ ಈ ವೇಳೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಈ ಬಾರಿಯೂ ಅತ್ಯಾಕರ್ಷಕವಾಗಿ ದೇವಿ ಕಾಣುವಂತೆ ಸಿಂಗರಿಸಲಾಗಿತ್ತು. ಈ ಬಾರಿ ವಿಶೇಷವಾಗಿ ದೇವಿಗೆ ಶಾವಿಗೆ ಅಲಂಕಾರ ಮಾಡಿದ್ದು ನೋಡುಗರ ಕಣ್ಮನ ಸೆಳೆಯುವ ಜೊತೆಗೆ ವಿಶೇಷ ಆಕರ್ಷಣೆಯಾಗಿತ್ತು. ಕಲಾವಿದ ಆರ್. ಎಸ್ ವೀರೇಶ್ ಅವರ ಕೈಯಲ್ಲರಳಿದ ಅಲಂಕಾರಕ್ಕೆ ಬಂದವರೆಲ್ಲಾ ಸಂತಸ ವ್ಯಕ್ತಪಡಿಸಿದ್ರು. ಮಾತ್ರವಲ್ಲ, ಇಡೀ ಬಡಾವಣೆಯು ದೀಪಗಳ ಬೆಳಕಿನಿಂದ ಕಂಗೊಳಿಸುತಿತ್ತು. ದೀಪಗಳ ಬೆಳಕಿನ ಚಿತ್ತಾರದಲ್ಲಿ ಭಕ್ತರು ಮಿಂದೆದ್ದರು.
ದೇವಸ್ಥಾನದ ಮುಂಭಾಗದಲ್ಲಿ ಕಿರಿಯರಿಂದ ಹಿಡಿದು ವಯೋವೃದ್ಧರೂ ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವಕ್ಕೆ ಮೆರುಗು ತಂದರು. ಕಾರ್ತಿಕೋತ್ಸವ ಹಿನ್ನೆಲೆಯಲ್ಲಿ ಬಂದ ಭಕ್ತಾದಿಗಳಿಗೆ ವಾಣಿ ವಿಲಾಸ ಚಂದ್ರಕಾಂತಮ್ಮ ಹಾಗೂ ಎಸ್. ಆರ್. ಮುರಿಗೆಪ್ಪ ದಂಪತಿ ಸ್ಮರಣಾರ್ಥ ಅವರ ಪುತ್ರರು ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.