ದಾವಣಗೆರೆ: ಬೆಣ್ಣೆ ನಗರಿಯಲ್ಲಿಯೂ ಕರ್ನಾಟಕ ಬಂದ್ ಬಿಸಿ ಮುಟ್ಟಿದೆ. ಕಾವೇರಿ ನೀರು ತಮಿಳುನಾಡಿಗೆ ಬಿಡದಂತೆ ಪ್ರತಿಭಟನೆ ಆರಂಭವಾಗಿದೆ. ಬೆಳಗ್ಗೆಯಿಂದಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಗರದ ಜಯದೇವ ವೃತ್ತದಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.
ದಾವಣಗೆರೆಯ ಜಯದೇವ ಸರ್ಕಲ್‌ನಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರುನಾಡು ಸಮರ ಸೇನೆಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಕಾವೇರಿ ನೀರು ತಮಿಳುನಾಡಿಗೆ ಬಿಡದಂತೆ ಒತ್ತಾಯಿಸಲಾಯಿತು. ಅಲ್ಲದೆ ಕರ್ನಾಟಕ ಬಂದ್ಗೆ ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮುನ್ನೆಚ್ಚರಿಕೆಯ ಕ್ರಮವಾಗಿ ನಗರದ ಜಯದೇವ ಸರ್ಕಲ್‌ನಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಇನ್ನು ಅಂಗಡಿ ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸದಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ಇಡೀ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದಲ್ಲಿ ಅಲ್ಲಲ್ಲಿ ಆಟೋ ಸಂಚಾರ ಕಾಣಸಿಗುತ್ತಿದೆ.
ಕೆಎಸ್ಆರ್ಟಿಸಿ ಬಸ್ಗಳು ಇಲ್ಲದೆ ಬಾಣಂತಿ ಪರದಾಟ: ಬೀದರ್ನಿಂದ ದಾವಣಗೆರೆ ಬಂದಿದ್ದ ಬಾಣಂತಿ ಹಾಗೂ ಕುಟುಂಬಸ್ಥರು, ಜಗಳೂರಿಗೆ ಹೋಗಲು ಬಸ್ ಇಲ್ಲದೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲೇ ಪರದಾಡಿರುವ ಘಟನೆ ನಡೆಯಿತು. ಇನ್ನು ಪ್ರತಿಭಟನಾಕಾರರು ಬಸ್ನಲ್ಲಿದ್ದ ಪ್ರಯಾಣಿಕರನ್ನು ಇಳಿಸಿರುವ ಪ್ರಸಂಗವು ನಡೆಯಿತು. ಇಂದು ಕರೆದಿರುವ ಬಂದ್ಗೆ ಪುಟ್ಟ ಬಾಲಕನೋರ್ವ ಬೆಂಬಲ ವ್ಯಕ್ತಪಡಿಸಿದ್ದಾನೆ.
ದಾವಣಗೆರೆಯ 35 ಕ್ಕೂ ಹೆಚ್ವು ಸಂಘಟನೆಗಳಿಂದ ಬಂದ್ಗೆ ಬೆಂಬಲ: ಬಂದ್ಗೆ 35ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ಬೆಳಗ್ಗೆಯಿಂದಲೇ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಬೀದಿಗೆ ಇಳಿದಿವೆ. ಕರುನಾಡು ಸಮರ ಸೇನೆ ಕೇಂದ್ರ ಹಾಗೂ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿತು. ಅಲ್ಲದೆ ಕರ್ನಾಟಕ ಬಂದ್ಗೆ ಬೆಂಬಲಿಸಿ ಅಂಗಡಿ ಮುಂಗಟ್ಟು ಮಾಲೀಕರು ಕೂಡ ಅಂಗಡಿಗಳಿಗೆ ಬೀಗ ಹಾಕಿ ಬೆಂಬಲಿಸಿದರು. ಅಲ್ಲದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆಯಾದ್ಯಂತ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ. ಹಾಗೆ ಎಸ್ಪಿ ಉಮಾ ಪ್ರಶಾಂತ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: Karnataka Bandh: ಚಾಮರಾಜನಗರದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಅರೆಬೆತ್ತಲೆ ಉರುಳು ಸೇವೆ, ರಸ್ತೆ ತಡೆ