ದಾವಣಗೆರೆ: ಪ್ರತಿವರ್ಷ ರಾಜ್ಯಸರ್ಕಾರ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಉರಗ ತಜ್ಞೆ, ಸೂಲಗಿತ್ತಿ ಸುಲ್ತಾನ್ ಬಿ ಆಯ್ಕೆಯಾಗಿದ್ದಾರೆ.
ವಿವರ:
ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಜಗಳೂರು ತಾಲೂಕಿನ ಸಾಧಕಿ 75 ವರ್ಷದ ವೃದ್ಧೆ ಸುಲ್ತಾನ್ ಬಿ ಅವರಿಗೆ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. ಸುಲ್ತಾನ್ ಬಿ ಸೂಲಗಿತ್ತಿಯಾಗಿ ಗ್ರಾಮೀಣ ಭಾಗದಲ್ಲಿ ಅನೇಕ ಹೆರಿಗೆಗಳನ್ನು ಮಾಡಿಸಿದ್ದಾರೆ. ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ನಿವಾಸಿಯಾಗಿದ್ದು, ಅನೇಕ ವರ್ಷಗಳಿಂದ ಉರಗ ತಜ್ಞೆಯಾಗಿ ಸಮಾಜ ಸೇವೆ ಮಾಡಿದ್ದಾರೆ. ಎರಡು ಬಾರಿ ಹಾವು ಕಚ್ಚಿದರೂ, ತಮ್ಮ ಸೇವೆಯನ್ನು ನಿಲ್ಲಿಸದೆ, ಛಲ ಬಿಡದೆ ಸೂಲಗಿತ್ತಿಯ ಕೆಲಸ ಮುಂದುವರೆಸಿದ್ದಾರೆ.
ಇದಲ್ಲದೆ ಇವರು ಕಜ್ಜಿ ಇಸುಬು ರೋಗಕ್ಕೆ ನಾಟಿ ಔಷಧಿ ನೀಡುತ್ತಿದ್ದಾರೆ. ಸುಲ್ತಾನ್ ಬಿಯವರ ಸೇವೆ ಪರಿಗಣಿಸಿರುವ ಸರ್ಕಾರ 66ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸದ್ಯ ವಯಸ್ಸಾಗಿದ್ದು ಸುಲ್ತಾನ್ ಬಿ ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಪ್ರಶಸ್ತಿ ಲಭಿಸಿರುವ ವಿಚಾರ ತಿಳಿದು ಹರ್ಷ ವ್ಯಕ್ತಪಡಿಸಿದರು.