ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯ ವೆಂಕಟೇಶ್ವರ ಕ್ಯಾಂಪ್ ಮತ್ತು ಬೆಳ್ಳಿಗನೂಡು ಗ್ರಾಮಗಳ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಜಂಟಿ ಕೃಷಿ ನಿರ್ದೇಶಕ (ಜಾಗೃತ ದಳ) ಪಿ.ರಮೇಶ್ಕುಮಾರ್ ಮತ್ತು ತಂಡ, ಬೀಜ, ರಸಗೊಬ್ಬರ, ಕೀಟನಾಶಕಗಳ ದಾಸ್ತಾನು ಮತ್ತು ವಿತರಣೆ ಬಗ್ಗೆ ಪರಿಶೀಲನೆ ನಡೆಸಿತು.
ಈ ವೇಳೆ ಮಾತನಾಡಿದ ಪಿ.ರಮೇಶ್ಕುಮಾರ್, ಕಳಪೆ, ನಕಲಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಮಾರಾಟಗಾರರ ಪರವಾನಿಗೆ ರದ್ದು ಪಡಿಸಲಾಗುವುದು. ಮಾರಾಟ ಮಳಿಗೆಗಳ ಮುಂದೆ ನೋಟಿಸ್ ಬೋರ್ಡ್ನಲ್ಲಿ ರಸಗೊಬ್ಬರ ಮಾರಾಟದ ದರ ಮತ್ತು ದಾಸ್ತಾನು ಬಗ್ಗೆ ರೈತರಿಗೆ ಕಾಣುವಂತೆ ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕಬೇಕು. ರೈತರಿಗೆ ಬಿತ್ತನೆ ಬೀಜ ಮಾರುವಾಗ ಬಿಲ್ನಲ್ಲಿ ಕಡ್ಡಾಯವಾಗಿ ಲಾಟ್ ಸಂಖ್ಯೆಯನ್ನ ನಮೂದಿಸಿ, ರೈತರ ಸಹಿ ಪಡೆದು ವಿತರಿಸಬೇಕು ಎಂದು ತಿಳಿಸಿದರು.
ಅಲ್ಲದೆ, ಅವಧಿ ಮೀರಿದ ಕೀಟನಾಶಕಗಳನ್ನ ಮಾರಾಟ ಮಾಡಬಾರದು ಹಾಗೂ ಕೆಲವು ಜೈವಿಕ ಉತ್ಪನ್ನಗಳಲ್ಲಿ ಪೀಡೆನಾಶಕ ಅಂಶ ಇರುವುದು ತಿಳಿದುಬಂದಿದ್ದು, ಅಂತಹ ಜೈವಿಕ ಉತ್ಪನ್ನಗಳನ್ನ ನಿಷೇಧಿಸಲಾಗಿದೆ. ಅವುಗಳನ್ನು ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಮಾರಾಟಗಾರರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಮುಖ್ಯ ಬೆಳೆಯಾಗಿದೆ. ಮುಂದಿನ ದಿನಗಳಲ್ಲಿ ಬಿತ್ತನೆ ಆರಂಭವಾಗಲಿದ್ದು, ಅಧಿಕೃತ ಮಾರಾಟಗಾರರಿಂದ ಪ್ಯಾಕ್ ಮಾಡಿದ ಬಿತ್ತನೆ ಬೀಜಗಳನ್ನ ಖರೀದಿಸಬೇಕೆಂದು ರೈತರಿಗೆ ಸಲಹೆ ನೀಡಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸುತ್ತಿರುವ ಬಿತ್ತನೆ ಬೀಜ, ಕೀಟನಾಶಕ, ಸಾವಯವ ಗೊಬ್ಬರ ಮತ್ತು ಲಘು ಪೋಷಕಾಂಶಗಳ ಮಾದರಿಗಳನ್ನು ಕೃಷಿ ಅಧಿಕಾರಿಗಳು ಕಡ್ಡಾಯವಾಗಿ ಸಂಗ್ರಹಿಸಿ ಸಂಬಂಧಪಟ್ಟ ಪ್ರಯೋಗಾಲಯಕ್ಕೆ ಸಲ್ಲಿಸಿ, ಅವುಗಳ ಗುಣಮಟ್ಟದ ಬಗ್ಗೆ ಖಾತರಿಪಡಿಸಿಕೊಂಡು ನಂತರ ರೈತರಿಗೆ ವಿತರಿಸಲು ಸೂಚಿಸಿದರು.