ದಾವಣಗೆರೆ : ನಗರದ ಆರು ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್ ಆಗಿ ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ತೀವ್ರ ನಿಗಾವಹಿಸಲಾಗಿದ್ದು, ಹೊರ ಹೋಗಲು ಮತ್ತು ಒಳ ಬರಲು ಒಂದು ಮಾರ್ಗವನ್ನು ಮಾತ್ರ ತೆರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಪ್ರತೀ ಕಂಟೇನ್ಮೆಂಟ್ ಝೋನ್ ನಲ್ಲಿ ಒಬ್ಬ ಇನ್ಸ್ ಪೆಕ್ಟರ್ ನಿಯೋಜಿಸಲಾಗಿದ್ದು, ಶೀತ ಜ್ವರದಿಂದ ಬಳಲುತ್ತಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ. ರೋಗಿಗಳನ್ನು ಪತ್ತೆ ಹಚ್ಚುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಪೊಲೀಸ್ ಸಿಬ್ಬಂದಿಯೂ ಸಾಥ್ ನೀಡುತ್ತಿದ್ದು, ಯಾರೂ ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರು ಮತ್ತು ಜಿಲ್ಲೆಯಿಂದ ಹೊರ ಹೋಗುವವರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಹೊರಗಡೆಯಿಂದ ಜಿಲ್ಲೆಗೆ ಆಗಮಿಸುವವರನ್ನು ಸಂಪೂರ್ಣ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.
ಪಿ 695 ಮಹಿಳೆಗೆ (53 ವರ್ಷ) ಸೋಂಕು ದೃಢಪಟ್ಟ ಹಿನ್ನೆಲೆ ನಗರದ ಎಸ್ಪಿಎಸ್ ನಗರವನ್ನು ಹೊಸ ಕಂಟೇನ್ಮೆಂಟ್ ಝೋನ್ ಆಗಿ ಗುರುತಿಸಲಾಗಿದೆ. ಇಲ್ಲಿ ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗಣೇಶ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.