ದಾವಣಗೆರೆ : ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಇದೀಗ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಯಾವುದೇ ಕಂಡೀಶನ್ ಇಲ್ಲದೆ ಫ್ರೀ ಯೋಜನೆಗಳನ್ನು ಬಡವರಿಗೆ ಸಿಗುವಂತೆ ಜಾರಿಗೆ ತನ್ನಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಮನವಿ ಮಾಡಿದರು.
ಇಂದು ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರಕ್ಕೇರಲು ಈ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದಿದ್ದರು. ಅದರೇ ಇದೀಗ ಯೋಜನೆಯನ್ನು ಜಾರಿಗೆ ತರಲು ಷರತ್ತುಗಳನ್ನು ವಿಧಿಸಿ ಜನರ ಕಿವಿಗೆ ಹೂವು ಇಡುವುದು ಸರಿಯಲ್ಲ. ಗ್ಯಾರಂಟಿಗಳನ್ನು ಘೋಷಣೆ ಮಾಡುವ ಮೂಲಕ ಭರವಸೆಯನ್ನಾಗಿ ನೀಡಿ ಜನರನ್ನು ಕಾಂಗ್ರೆಸ್ ನಾಯಕರು ಮರಳು ಮಾಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ : ಬಾಡಿಗೆದಾರರಿಗೂ 200 ಯೂನಿಟ್ ವಿದ್ಯುತ್ ಉಚಿತ: ಸಿಎಂ ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸೋದು ಸರಿಯಲ್ಲ. ಚುನಾವಣೆಗೆ ಮುಂಚೆ ಷರತ್ತುಗಳನ್ನು ತಿಳಿಸದೇ ಗ್ಯಾರಂಟಿ ಘೋಷಣೆ ಮಾಡಿದ್ದೀರಿ. ನೀವು ಘೋಷಣೆ ಮಾಡಿರುವ ಯಾವುದೇ ಫ್ರೀ ಘೋಷಣೆಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ಬೇಡ. ಯಾರು ಬಡವರು, ನಿರ್ಗತಿಕರು ಇದಾರೋ ಅವರಿಗೆ ಫ್ರಿ ಯೋಜನೆಗಳನ್ನು ಯಾವುದೇ ಕಂಡೀಶನ್ ಹಾಕದೆ ಕೊಡಿ ಎಂದು ಎಂ ಪಿ ರೇಣುಕಾಚಾರ್ಯ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಕೊಟ್ಟ ಮಾತು ಉಳಿಸಿಕೊಳ್ಳಿ, ವಚನ ಭ್ರಷ್ಟರಾಗಬೇಡಿ : ರಾಜ್ಯದ ಎಲ್ಲ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಫ್ರೀ ಎಂದು ಘೋಷಣೆ ಮಾಡಿದ್ದವರು ನೀವು. ಇಂದು ಎಲ್ಲಾ ಗ್ಯಾರಂಟಿಗಳಿಗೆ ಷರತ್ತು ವಿಧಿಸಿರುವುದೇಕೆ. ಚುನಾವಣೆ ವೇಳೆ ಕೊಟ್ಟಿದ್ದ ಮಾತು ಉಳಿಸಿಕೊಳ್ಳಿ. ಬದಲಾಗಿ ವಚನ ಭ್ರಷ್ಟರಾಗಬೇಡಿ ಎಂದು ಎಂ.ಪಿ ರೇಣುಕಾಚಾರ್ಯ ಕಿರಿಕಾರಿದರು.
ಗೃಹ ಲಕ್ಷ್ಮಿ ಯೋಜನೆ ತಂದು ಅತ್ತೆ ಸೊಸೆಗೆ ಜಗಳ ತಂದಿಟ್ಟೀದ್ದೀರ. ಈಗಾಗಲೇ ಮನೆಗಳಲ್ಲಿ ಅತ್ತೆ ಸೊಸೆ ಗಲಾಟೆ ಆರಂಭವಾಗಿದ್ದು, ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಯಾವುದೇ ಷರತ್ತು ಇಲ್ಲದೆ ಉಚಿತ ವಿದ್ಯುತ್ ಕೊಡಿ. ಇನ್ನು ಹೈಟೆಕ್ ಮಲ್ಟಿ ಆ್ಯಕ್ಸಲ್ ಬಸ್ ಮೊದಲೇ ಇಲ್ಲ. ಈ ಬಸ್ ಫ್ರೀ ಎಂದು ಷರತ್ತುಗಳನ್ನು ವಿಧಿಸಬೇಡಿ. ಚುನಾವಣೆಗೆ ಮುಂಚೆಯೇ ಎಸಿ ಬಸ್ ಇಲ್ಲ ಅಂತಾ ಹೇಳಿದ್ದೀರಾ? ಎಂದು ಪ್ರಶ್ನೆ ಮಾಡಿದ ಎಂ.ಪಿ ರೇಣುಕಾಚಾರ್ಯ, ಹಾಲಿಗೆ ಪ್ರೋತ್ಸಾಹ ಧನ ಕಡಿತ ಮಾಡಿದ್ದೀರಿ. ಜನರ ಮೇಲೆ ಹೆಚ್ಚಿನ ತೆರಿಗೆ ಹಾಕಬೇಡಿ. ತೆರಿಗೆ ಹೆಚ್ಚು ಹಾಕಿ ಬೆಲೆ ಏರಿಕೆ ಮಾಡಿ ಪಾಕಿಸ್ತಾನ, ಶ್ರೀಲಂಕಾ ಬರ್ಬಾದ್ ಆಗೋ ತರ ಆಗೋದು ಬೇಡ ಎಂದರು.
ಇದನ್ನೂ ಓದಿ : ಚುನಾವಣಾ ಪೂರ್ವದಲ್ಲಿ ಯಾವುದೇ ಷರತ್ತಿಲ್ಲದೆ ಗ್ಯಾರಂಟಿ ಘೋಷಿಸಿದವರು ಯಾರು: ಹೆಚ್ಡಿಕೆ ಪ್ರಶ್ನೆ