ದಾವಣಗೆರೆ: ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹಕ್ಕೆ ನನ್ನ ಸಹಮತವೂ ಇದೆ. ಆರು ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿದ್ದೇವೆ. ಇಂಥವರಿಗೇ ನೀಡಿ ಎಂದು ಹೇಳೋದಿಲ್ಲ. ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಗೆ ಸಚಿವ ಸ್ಥಾನ ನೀಡಬೇಕು. ಯಡಿಯೂರಪ್ಪ ಅವರು ಈ ಬಗ್ಗೆ ಕ್ರಮಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಎಸ್ ವಿ ರಾಮಚಂದ್ರ ಹೇಳಿದ್ರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿಯೇ ಕೆಲಸ ಮಾಡಿದ್ದ ಬಿ ಸಿ ಪಾಟೀಲರಿಗೆ ಇಲ್ಲಿನ ಇಂಚಿಂಚೂ ಮಾಹಿತಿ ಇದೆ. ಹಾಗಾಗಿ ಅಧಿವೇಶನದ ಬಳಿಕ ಕೃಷಿ ಸಚಿವ ಬಿ ಸಿ ಪಾಟೀಲ್ ಉಸ್ತುವಾರಿ ಸಚಿವರಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದಂತೆ ಕೇಳುವವನು. ನನಗೆ ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ. ಸ್ಥಾನ ಕೊಟ್ಟರೆ ಯಾರು ಬೇಡ ಅಂತಾರೆ ನೀವೇ ಹೇಳಿ ಎಂದು ರಾಮಚಂದ್ರ ಪ್ರಶ್ನಿಸಿದರು. ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹಕ್ಕೆ ನನ್ನ ಸಹಮತವೂ ಇದೆ. ಆರು ಶಾಸಕರು ಬಿಜೆಪಿಯಿಂದ ಆರಿಸಿ ಬಂದಿದ್ದೇವೆ. ಯಾರಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಈ ಬಗ್ಗೆ ವಿನಾಕಾರಣ ಪ್ರಚಾರ ಮಾಡಲಾಗುತ್ತಿದೆ. ಶಾಸಕರಾದ ನಮ್ಮನ್ನು ಚೆನ್ನಾಗಿಯೇ ಮಾತನಾಡಿಸುತ್ತಾರೆ. ಅಭಿವೃದ್ಧಿ ವಿಚಾರದಲ್ಲಿ ನಮಗೆ ಈವರೆಗೆ ಯಾವ ತೊಂದರೆಯೂ ಆಗಿಲ್ಲ. ಬೆಂಗಳೂರಿನಲ್ಲಿ ಇರುವುದರಿಂದ ಸಹಜವಾಗಿ ಭೇಟಿ ಆಗ್ತಿರ್ತಾರೆ ಅಷ್ಟೇ ಎಂದು ಶಾಸಕ ರಾಮಚಂದ್ರ ಸ್ಪಷ್ಟನೆ ನೀಡಿದರು.