ದಾವಣಗೆರೆ : ಹೊನ್ನಾಳಿ ಪಟ್ಟಣ ಪಂಚಾಯತ್ ಬಿಜೆಪಿ ಪಾಲಾಗಿದೆ. ಅಧ್ಯಕ್ಷರಾಗಿ ಕೆ ವಿ ಶ್ರೀಧರ್ ಹಾಗೂ ಉಪಾಧ್ಯಕ್ಷರಾಗಿ ಪಿ.ರಂಜಿತಾ ವಡ್ಡಿಚನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ "ಅ'' ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಕಾಂಗ್ರೆಸ್‌ನಿಂದ ಯಾವುದೇ ಉಮೇದುವಾರಿಕೆ ಸಲ್ಲಿಕೆಯಾಗದ ಕಾರಣ ಅವಿರೋಧ ಆಯ್ಕೆಯಾಗಿದೆ. ಆದರೆ, ಚುನಾವಣೆ ನಡೆಯಬಹುದು ಎಂದು ಅಂದಾಜಿಸಲಾಗಿತ್ತಾದ್ರೂ ಕಾಂಗ್ರೆಸ್ ಕಣದಿಂದ ಹಿಂದೆ ಸರಿದಿದೆ.
ಅವಿರೋಧವಾಗಿ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ತುಷಾರ್ ಬಿ.ಹೊಸೂರ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅವರನ್ನು ಕಾರ್ಯಕರ್ತರು ಎತ್ತಿ ಕುಣಿದು ಕುಪ್ಪಳಿಸಿದರು. ಪಟ್ಟಣದಲ್ಲಿ ತೆರೆದ ವಾಹನದ ಮೂಲಕ ಮೆರವಣಿಗೆ ನಡೆಸಿದರು.
ಜಗಳೂರಿನಲ್ಲಿ ಅರಳಿದ ಬಿಜೆಪಿ : ಅತ್ತ ಜಗಳೂರು ಪಟ್ಟಣ ಪಂಚಾಯತ್‌ನಲ್ಲಿಯೂ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಬಿಜೆಪಿಯ ಆರ್.ತಿಪ್ಪೇಸ್ವಾಮಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಲಲಿತಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಪಟ್ಟಣ ಪಂಚಾಯತ್‌ನ 18 ಸದಸ್ಯರ ಪೈಕಿ ಬಿಜೆಪಿಯ 11, ಕಾಂಗ್ರೆಸ್‌ನ 5 ಹಾಗೂ ಜೆಡಿಎಸ್‌ನ ಇಬ್ಬರು ಸದಸ್ಯರಿದ್ದಾರೆ. ನಿರೀಕ್ಷೆಯಂತೆ ಬಹುಮತ ಹೊಂದಿದ್ದ ಬಿಜೆಪಿ ಅಧಿಕಾರ ಹಿಡಿದಿದೆ.