ದಾವಣಗೆರೆ: ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ನೂತನ ಕಾನೂನು ತರುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು. ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠಕ್ಕೆ ಭೇಟಿ ನೀಡಿ ಪ್ರಸನ್ನಾನಂದ ಪುರಿ ಶ್ರೀಯವರನ್ನು ಭೇಟಿಯಾದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ಕಾನೂನು ತರುತ್ತಿದ್ದೇವೆ. ಬಡವರ ಪ್ರಕರಣಗಳು ಕೋರ್ಟ್ನಲ್ಲಿ ವಿಳಂಭವಾಗುತ್ತಿವೆ. ಈ ಕೇಸ್ಗಳು ಅದಷ್ಟು ಬೇಗ ಇತ್ಯರ್ಥವಾಗಬೇಕು. ಹೀಗಾಗಿ ಅದರ ಬಗ್ಗೆ ಕಾನೂನು ತರಲು ಮುಂದಾಗಿದ್ದೇವೆ ಎಂದರು.
ಇನ್ನು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ವರ್ಗವಣೆ ದಂಧೆ ನಮ್ಮ ಸರ್ಕಾರದಲ್ಲಿ ನಡೆಯೋದಿಲ್ಲ, ಇದಕ್ಕೆ ಸಿಎಂ ಸಿದ್ದರಾಮಯ್ಯನವರು ಆಸ್ಪದ ಕೊಡಿವುದಿಲ್ಲ. ದೂರು ಇದ್ದರೆ ಕೊಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದರು ಎಂದು ಸಚಿವ ಹೆಚ್ ಕೆ ಪಾಟೀಲ್ ಅವರು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಚುನಾವಣೆಯ ಮೊದಲು ಎಲ್ಲಾ ಮಠಗಳ ಜೊತೆ ಅನ್ಯೋನ್ಯ ಸಂಬಂಧ ಇಟ್ಟಿದ್ದೇ, ಇಷ್ಟು ಮಟ್ಟದ ಗೆಲುವು ಸಾಧಿಸಲು ಮಠಗಳು, ಸ್ವಾಮೀಜಿಗಳ ಆಶೀರ್ವಾದ ಕೂಡ ಒಂದು ಕಾರಣ. ಸ್ವಾಮೀಜಿಗಳ ಜೊತೆ ವಿಶೇಷ ಸಂಪರ್ಕ ಹೊಂದಿದವರು ನಾವು. ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಹೀಗೆ ಹತ್ತು ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದು, ರಾಜ್ಯದ ಅಭಿವೃದ್ಧಿ ಜೊತೆ ಹಲವು ಚರ್ಚೆಯನ್ನು ಪ್ರಸನ್ನಾನಂದ ಪುರಿ ಶ್ರೀಯವರ ಜೊತೆ ಮಾಡಿದೆವು ಎಂದು ತಿಳಿಸಿದರು.
ಜೆಡಿಎಸ್ ಹಾಗೂ ಬಿಜೆಪಿ ಲೋಕಸಭೆಯಲ್ಲಿ ಹೊಂದಾಣಿಕೆ ವಿಚಾರ: ಲೋಕಸಭೆ ಚುನಾವಣೆ ಯಾವಾಗ ಮಾಡುತ್ತಾರೆ ಎಂಬುದು ಪ್ರಕಟವಾಗಿಲ್ಲ. ಜೆಡಿಎಸ್ ಮತ್ತು ಬಿಜೆಪಿಯವರು ಹೊಡೆದಾಡಿಕೊಂಡಿದ್ದನ್ನು ನೀವೇ ನೋಡಿದ್ದೀರಿ. ಆದರೆ ಅವರು ಜೊತೆ ಕೂಡುತ್ತಾರೆ ಎಂದು ನೀವು ಹೇಗೆ ಹೇಳ್ತಿರಾ ಎಂದು ಹೆಚ್ ಕೆ ಪಾಟೀಲ್ ಪ್ರಶ್ನಿಸಿದರು.
ಇನ್ನು, ಆರ್ ಎಸ್ಎಸ್ ಗೆ ಸರ್ಕಾರ ಕೊಟ್ಟಿದ್ದ ಜಮೀನು ವಾಪಸ್ ತೆಗೆದುಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರಕ್ಕೆ ನಾವು ಪ್ರತಿಕ್ರಿಯೆ ನೀಡೋದಿಲ್ಲ ಎಂದರು. ಇನ್ನು ಬೆಲೆ ಏರಿಕೆ ಬಗ್ಗೆ ಮಾತನಾಡಿ ಬೆಲೆ ಏರಿಕೆ ಮಾಡುವವರು ಕೇಂದ್ರ ಸರ್ಕಾರದವರು. ನಾವು ಗೃಹ ಲಕ್ಷ್ಮಿ ಯೋಜನೆ ತಂದು ಬ್ಯಾಲೆನ್ಸ್ ಮಾಡುತ್ತೇವೆ. ಬೆಲೆ ಏರಿಕೆ ಕಡಿಮೆ ಮಾಡಲು ರಾಜ್ಯ ಸರ್ಕಾರದ ಬಳಿ ಆಸ್ತ್ರ ಇರೋದಿಲ್ಲ, ಅದನ್ನು ಸರಿದೂಗಿಸಲು ಚಿಂತನೆ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ನಿಂದ ಲೋಕಸಭೆ ಚುನಾವಣೆಗೆ ತಾಲೀಮು: ರಾಹುಲ್ರಿಂದ ಸಿದ್ದರಾಮಯ್ಯ ಸರ್ಕಾರದ ಪರಾಮರ್ಶೆ..?