ದಾವಣಗೆರೆ: ಹರಿಹರ ತಾಲೂಕಿನಲ್ಲಿ ಚಿತ್ತ ಮಳೆಯು ಧಾರಾಕಾರವಾಗಿ ಸುರಿದ ಹಿನ್ನೆಲೆ ರೈತರ ಭತ್ತ, ರಾಗಿ, ಮೆಕ್ಕೆಜೋಳ, ಕಬ್ಬು, ಅಡಕೆ, ತರಕಾರಿ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ನಗರದ ತಗ್ಗು ಪ್ರದೇಶಗಳಲ್ಲಿರುವ ಚರಂಡಿ ಹಾಗೂ ಕಾಲುವೆ, ಮನೆಗಳಿಗೆ ನೀರು ನುಗ್ಗಿ ಜನರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.
ನಗರ ಪ್ರಾಂತ್ಯದಲ್ಲಿ 106 ಎಂ.ಎಂ, ಮಲೇಬೆನ್ನೂರಿನಲ್ಲಿ 41.8 ಎಂ.ಎಂ, ಕೊಂಡಜ್ಜಿಯಲ್ಲಿ 70.0 ಎಂ.ಎಂ, ಹೊಳೆಸಿರಿಗೆರೆಯಲ್ಲಿ 33.4 ಎಂ.ಎಂ ಮಳೆಯಾಗಿದೆ. ಒಟ್ಟು ತಾಲೂಕಿನಾದ್ಯಂತ 251.6 ಮಿಲಿ ಮೀಟರ್ ಮಾಳೆಯಾಗಿದೆ. ಈ ಬಾರಿಯ ಮಳೆಗಾಲದಲ್ಲಿ ಇದೇ ಮೊದಲ ಬಾರಿ ಹೆಚ್ಚು ಪ್ರಮಾಣದ ಮಳೆಯಾಗಿದೆ.
ಹಾನಿಗೆ ಕಾರಣ ಏನು? : ತಾಲೂಕಿನ ಯಾವ ಯಾವ ಭಾಗಗಳಲ್ಲಿ ಮಳೆಯ ನೀರು ನುಗ್ಗಿದೆಯೋ, ಆ ಸ್ಥಳಗಳು ಜನರಿಂದ ಅತಿಕ್ರಮಣವಾಗಿವೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಜನರು ಆರೋಪಿಸುತ್ತಿದ್ದಾರೆ. ರಾಜ ಕಾಲುವೆಗಳನ್ನು ಉಳ್ಳವರು ಒತ್ತುವರಿ ಮಾಡಿರುವುದು ಮತ್ತು ಅಧಿಕಾರಿಗಳು ಕಾಲುವೆಗಳಲ್ಲಿ ಹೂಳು ತೆಗೆಯದೇ ಕರ್ತವ್ಯ ನಿರ್ಲಕ್ಷ್ಯ ತೋರಿರುವುದು ಈ ಎಲ್ಲ ಅವಾಂತರಕ್ಕೆ ಕಾರಣವಾಗಿದೆ.