ದಾವಣಗೆರೆ: ಇಂದು ಬೆಳಿಗ್ಗೆ ಜಿಲ್ಲೆಯ ವಿವಿಧೆಡೆ ಜೋರು ಭಾರಿ ಮಳೆ ಸುರಿಯಿತು. ಮುಂಜಾವಿನ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ನಗರದ ಅಂಡರ್ ಪಾಸ್ಗಳಲ್ಲಿ ನೀರು ತುಂಬಿ, ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸವಾರರು ಕಿರಿಕಿರಿ ಅನುಭವಿಸಿದರು. ಇನ್ನೊಂದೆಡೆ, ಮಳೆ ಇಲ್ಲದೆ ಕಂಗೆಟ್ಟಿದ್ದ ಜನರು ವರುಣ ತಂಪರೆದಿದ್ದರಿಂದ ಪುಳಕಗೊಂಡರೆ, ರೈತರು ಅಕಾಲಿಕ ಮಳೆಗೆ ಬೇಸರ ವ್ಯಕ್ತಪಡಿಸಿದರು.
ನಗರದ ಈರುಳ್ಳಿ ಮಾರುಕಟ್ಟೆ ಬಳಿ ಇರುವ ರೈಲ್ವೆ ಅಂಡರ್ ಪಾಸ್ನಲ್ಲಿ ನೀರು ನಿಂತ ದೃಶ್ಯ ಕಂಡುಬಂತು. ಹರಿಹರ, ದಾವಣಗೆರೆ ತಾಲೂಕಿನ ಸುತ್ತಮುತ್ತಲೂ ತುಂತುರು ಮಳೆ ಬಿದ್ದಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳಲ್ಲೇ ನೀರು ಹರಿಯುತ್ತಿತ್ತು. ಇದರಿಂದಾಗಿ ವಾಹನ ಸವಾರರು ಹಾಗು ಪಾದಚಾರಿಗಳಿಗೆ ತೊಂದರೆಯಾಯಿತು.
ವೃದ್ಧೆಯೊಬ್ಬರು ರಸ್ತೆ ದಾಟಲು ಹೋಗಿ ನೀರಿಗೆ ಬಿದ್ದರು. ಇದಕ್ಕೆ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ಜನರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಧಾರವಾಡ: ಕುಡಿಯುವ ನೀರಿಗೆ ಹಾಹಾಕಾರ, ಕೆಲಸ ಬಿಟ್ಟು ನೀರಿಗಾಗಿ ಅಲೆದಾಟ