ದಾವಣಗೆರೆ: ಕೊರೊನಾ ವೈರಸ್ ಭೀತಿ ಈಗ ಎಲ್ಲೆಡೆ ಶುರುವಾಗಿದೆ. ಇದು ಬೆಣ್ಣೆನಗರಿಯನ್ನೂ ಬಿಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಇದಕ್ಕೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆರೋಗ್ಯ ಇಲಾಖೆಯು ನೀಡಿರುವ ಪಟ್ಟಿಯಲ್ಲಿ ಜಿಲ್ಲೆಯ 14 ಮಂದಿ ಸಿಂಗಾಪುರ್, ಥೈಲ್ಯಾಂಡ್, ಹಾಂಗ್ಕಾಂಗ್, ಮಲೇಶಿಯಾ, ಜಪಾನ್, ಕೊರಿಯಾ, ವಿಯೇಟ್ನಾಂ, ಇಂಡೋನೇಷಿಯಾ, ನೇಪಾಳ, ಇಟಲಿ, ಇರಾನ್, ಯುಎಇಗೆ ಪ್ರವಾಸ ಕೈಗೊಂಡಿದ್ದರು. ಈ ಹದಿನಾಲ್ಕು ಮಂದಿಯ ಮನೆಗಳಿಗೆ ಭೇಟಿ ನೀಡಿ ಕೊರೊನಾ ವೈರಸ್ ಸೋಂಕಿನ ತಪಾಸಣೆ ನಡೆಸಲಾಗಿದೆ. 28 ದಿನಗಳ ಕಾಲ ತೀವ್ರ ನಿಗಾ ವಹಿಸಲಾಗಿದ್ದು, ಯಾರಲ್ಲೂ ಸೋಂಕು ಕಂಡು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ಎಸ್.ರಾಘವೇಂದ್ರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಚನ್ನಗಿರಿ ತಾಲೂಕಿನ ಗರಗ ಗ್ರಾಮದ ವಿದ್ಯಾರ್ಥಿ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಲು ತೆರಳಿದ್ದ. ಈತ ವಾಪಸ್ ಆಗಿದ್ದು, ಆತನ ಮನೆಯಲ್ಲಿಯೇ ತೀವ್ರ ನಿಗಾದಲ್ಲಿಡಲಾಗಿತ್ತು. ಆದ್ರೆ, ಈತನಿಗೂ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ. ಹಾಗಾಗಿ, ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿಲ್ಲ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದರು.
ವಿದೇಶ ಪ್ರವಾಸ ಕೈಗೊಂಡ ವಿವರ ಸಿಕ್ಕ ಕೂಡಲೇ ಜಿಲ್ಲಾ ಸರ್ವೇಕ್ಷಣಾ ಘಟಕ ಅಲರ್ಟ್ ಆಗಿದೆ. ಕೂಡಲೇ ವಿದೇಶಕ್ಕೆ ತೆರಳಿದ್ದ ಎಲ್ಲರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದ್ರೆ, ಯಾರಿಗೂ ಸೋಂಕು ತಗುಲಿಲ್ಲ. ಯಾವುದೇ ಪ್ರಯಾಣಿಕರಲ್ಲಿಯೂ ಕಂಡು ಬಂದಿಲ್ಲ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ.
ಒಟ್ಟಿನಲ್ಲಿ ಈಗಾಗಲೇ ಕೊರೊನಾ ವೈರಸ್ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗಿದೆ. ಸೋಂಕು ಕಂಡುಬಂದ ತಕ್ಷಣ ಪರೀಕ್ಷೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಬಿದ್ದಲ್ಲಿ ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ಗೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.