ಹರಿಹರ : ನಾಳೆಯಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಲು ಶಿಕ್ಷಣ ಇಲಾಖೆ ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಸಂಪೂರ್ಣ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ತಿಳಿಸಿದರು.
ಈ ಕುರಿತಂತೆ ಮಾಹಿತಿ ನೀಡಿದ ಅವರು, ತಾಲೂಕಿನ ಗ್ರಾಮೀಣ ಭಾಗದಲ್ಲಿ 6 ಹಾಗೂ ನಗರ ಪ್ರದೇಶದ 4 ಕೇಂದ್ರಗಳಲ್ಲಿ ಒಟ್ಟು 3059 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಕೇಂದ್ರದ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಪ್ರತಿಯೊಂದು ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು. ಸ್ಯಾನಿಟೈಸರ್ ಹಾಕುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು. ಈ ವೇಳೆ ಹೆಚ್ಚಿನ ಉಷ್ಣಾಂಶ ಕಂಡು ಬಂದ ವಿದ್ಯಾರ್ಥಿಗಳನ್ನು ಕೇಂದ್ರದಲ್ಲಿ ಕಾಯ್ದಿರಿಸಿರುವ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಇವರಿಗೆ ಆರೋಗ್ಯ ಇಲಾಖೆಯಿಂದ ಮಾಸ್ಕ್‌ಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪರೀಕ್ಷಾ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಗಳು ಪರಸ್ಪರ ಕೈ ಕುಲುಕುವುದು, ಅಪ್ಪಿಕೊಳ್ಳುವುದು ಮತ್ತು ಉಗುಳುವುದನ್ನು ಮಾಡುವಂತಿಲ್ಲ. ಅನಾವಶ್ಯಕವಾಗಿ ಕಿಟಿಕಿ, ಬಾಗಿಲು ಇತರೆ ವಸ್ತುಗಳನ್ನು ಮುಟ್ಟುವಂತಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಅನಾರೋಗ್ಯದ ಸೂಚನೆ ಕಂಡುಬಂದರೆ ತಕ್ಷಣ ಮೇಲ್ವಿಚಾರಕರಿಗೆ ತಿಳಿಸಬೇಕು ಎಂದರು.
ಪ್ರತ್ಯೇಕವಾದ ಬ್ಯಾಗ್ ನಲ್ಲಿ ನೀರಿನ ಬಾಟಲ್, ಊಟದ ಡಬ್ಬಿಯನ್ನು ವಿದ್ಯಾರ್ಥಿಗಳೇ ತರಬೇಕು. ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ವಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದ್ದು, ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಒಂದು ಗಂಟೆ ಮುಂಚಿತವಾಗಿ ಬರುವಂತೆ ಸೂಚಿಸಿದೆ ಎಂದರು.
ಪ್ರತಿ ಪರೀಕ್ಷೆ ನಂತರ ಕೇಂದ್ರವನ್ನು ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಲಾಗುವುದು. ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಸಹಕಾರದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.