ಹರಿಹರ(ದಾವಣಗೆರೆ) : ಗ್ರಾಮಾಂತರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಸ್ಐ ಡಿ.ರವಿಕುಮಾರ್ ಅವರಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಬಂದಿತ್ತು ಈಗ ಅದನ್ನು ಎದುರಿಸಿ ಆರೋಗ್ಯವಾಗಿ ಮತ್ತೆ ಕಾರ್ಯಪ್ರವೃತ್ತರಾಗಿದ್ದಾರೆ.
ತಾಲೂಕಿನಲ್ಲಿ ಸದಾ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಡಿ. ರವಿಕುಮಾರ್ ಕೊರೊನಾ ಎದುರಿಸಿ ಬಂದ ನಿಮಿತ್ತ ಗ್ರಾಮಾಂತರ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಶಿವಪ್ರಸಾದ್, ನಗರ ಠಾಣೆಯ ಪಿಎಸ್ಐ ಶೈಲಶ್ರಿ ಹಾಗೂ ಸಿಬ್ಬಂದಿಯು ಹೂ ಮಳೆಯನ್ನು ಸುರಿಸುವ ಮೂಲಕ ಸೇವೆಗೆ ಬರಮಾಡಿಕೊಂಡು ನಂತರ ಸನ್ಮಾನಿಸಿದರು.
ಗ್ರಾಮಾಂತರ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಮಾತನಾಡಿ, ಕೊರೊನಾ ಮಹಾಮಾರಿಯು ಜಗತ್ತಿಗೆ ಮಾರಕವಾಗಿದೆ. ನಮ್ಮ ದೇಶವು ಕೂಡ ಈ ಕೋವಿಡ್ 19 ಹೆಮ್ಮಾರಿಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ಈ ವೈರಸ್ ಎಲ್ಲಾ ಕ್ಷೇತ್ರದ ಜನರಿಗೂ, ಎಲ್ಲಾ ವರ್ಗದ ಜನರಿಗೂ ಬರುವಂತಹ ಮಹಾಮಾರಿಯಾಗಿದೆ. ಎಷ್ಟು ಎಚ್ಚರದಿಂದ ಇದ್ದರೂ ಸಹ ಬಂದು ಹೋಗುವುದಾಗಿದೆ. ಕೊರೊನಾ ಬಂದಾಗಿನಿಂದಲೂ ಸತತ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿರುವ ಹಲವಾರು ಇಲಾಖೆಗಳನ್ನು ನಾವು ಕಾಣಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಪೋಲಿಸ್ ಇಲಾಖೆಯ ಪಾತ್ರ ಬಹುಮುಖ್ಯವಾಗಿ ಕಾಣುತ್ತದೆ. ಹಗಲಿರುಳು ಲೆಕ್ಕಿಸದೇ ಕಾರ್ಯ ನಿರ್ವಹಿಸಿದ ಪೋಲಿಸ್ ಇಲಾಖೆಗೂ ಕೂಡ ಕೊರೊನಾ ಮಹಾಮಾರಿ ಕಾಲಿಟ್ಟಿದ್ದು ಒಂದು ವಿಪರ್ಯಾಸ. ಗುಣಮುಖರಾಗಿ ಸೇವೆಗೆ ಬಂದ ರವಿಕುಮಾರ್ ತಮ್ಮ ಸೇವೆಯನ್ನು ಮುಂದುವರೆಸಲಿ ಎಂದರು.
ಸಿಪಿಐ ಶಿವಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಲಿಸ್ ಸಿಬ್ಬಂದಿಗೂ ಕೂಡ ಕೋವಿಡ್ ವೈರಸ್ ಬಂದಿತ್ತು. ರವಿಕುಮಾರ್ ಕೊರೊನಾವನ್ನು ಗೆದ್ದು ಬಂದು ಕಾರ್ಯ ಪ್ರವೃತ್ತರಾಗಿದ್ದಾರೆ. ಠಾಣೆಯ ಸಿಬ್ಬಂದಿಯ ಸಹಯೋಗದೊಂದಿಗೆ ಕೊರೊನಾದಿಂದ ಗುಣಮುಖರಾದ ಗ್ರಾಮಾಂತರ ಪಿಎಸ್ಐ, ಎಎಸ್ಐ ಹಾಗೂ ಕಾನ್ಸ್‌ಟೇಬಲ್ ಇವರಿಗೆ ಹೂ ಮಳೆ ಮೂಲಕ ಪುಷ್ಪವನ್ನು ಹಾಕಿ ನಂತರ ಸನ್ಮಾನಿಸುತ್ತಿದ್ದೇವೆ ಎಂದರು.
ಗ್ರಾಮಾಂತರ ಡಿವೈಎಸ್ಪಿ ನರಸಿಂಹರವರು ಮಾತನಾಡಿ, ಜನರಿಗೆ ರಕ್ಷಣೆಯನ್ನು ನೀಡುವ ನಮಗೆ ಕೊರೊನಾದಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ ಆದಷ್ಟೂ ಜಾಗೃತರಾಗಿ ಕಾರ್ಯವನ್ನು ಮಾಡೋಣ ಎಂದರು.
ನಗರ ಠಾಣೆ ಪಿಎಸ್ಐ ಶೈಲಶ್ರೀ ಮಾತನಾಡಿ, ತಾಲೂಕಿನ ರಕ್ಷಣೆಯ ಜವಾಬ್ದಾರಿಯನ್ನು ನಿಭಾಯಿಸುವ ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಕೊರೊನಾ ಕಂಟಕ ಎದುರಾಗಿದ್ದು ಅವರು ಬೇಗನೆ ಚೇತರಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡಿರುವುದು ತುಂಬಾ ಸಂತೋಷದ ವಿಚಾರವೆಂದು ತಿಳಿಸಿದರು.
ಈ ವೇಳೆ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು