ಹರಿಹರ: ಕೋವಿಡ್ ವಿರುದ್ಧ ಹೋರಾಡಲು ನಾವೆಲ್ಲರೂ ತಂಡವಾಗಿ ಸಮಾಜ ಸೇವೆ ಮಾಡಲು ಮುಂದಾಗಬೇಕಿದೆ ಎಂದು ಕೆ.ಆರ್. ನಗರ 5ನೇ ವಾರ್ಡ್ನ ನಗರಸಭೆ ಸದಸ್ಯೆ ನಾಗರತ್ನಮ್ಮ ಹೇಳಿದರು.
ನಗರದ ವಿದ್ಯಾದಾಯಿನಿ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಮತ್ತು ಬೂತ್ ಮಟ್ಟದಲ್ಲಿ, ಸ್ಥಳೀಯ ನಾಗರಿಕರು, ಜನಪ್ರತಿನಿಧಿಗಳು, ವೈದ್ಯರು, ಪೊಲೀಸರು, ವಕೀಲರು, ಅಧಿಕಾರಿಗಳು, ನೌಕರರು, ಪತ್ರಕರ್ತರು ಮತ್ತು ಎನ್‍ಜಿಒ ಮತ್ತು ಇತರರನ್ನು ಒಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ರಚಿಸಬೇಕೆಂದು ನಗರಸಭೆಯಿಂದ ಆದೇಶದ ಬಂದಿದೆ. ಈ ಹಿನ್ನೆಲೆ ನಾವೆಲ್ಲರೂ ಒಂದು ತಂಡವಾಗಿ ಸೇರಿಕೊಂಡು ಸಮಾಜಕ್ಕೆ ಸೇವೆ ಮಾಡಲು ಮುಂದಾಗಬೇಕಿದೆ ಎಂದು ಹೇಳಿದರು.
ಕೊರೊನಾ ನಿಯಂತ್ರಣ ಮಾಡಲು ಯಶಸ್ಸಿನ ಹೆಜ್ಜೆ ಇಡಬೇಕಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಕೆ.ಆರ್. ನಗರದ ಜನತೆ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಮತ್ತು ಲಾಕ್ಡೌನ್ಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದಿರುವವರಿಗೆ ಕ್ವಾರಂಟೈನ್ ಮಾಡಲಾಗುತ್ತಿದೆ. ಜನರು ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸಬಾರದು. ಎಲ್ಲರೂ ಮುಂಜಾಗ್ರತಾ ಕ್ರಮ ಕೈಗೊಂಡು ಆರೋಗ್ಯ, ಪೊಲೀಸ್ ಇಲಾಖೆ ಮತ್ತು ಸ್ಥಳೀಯಾಡಳಿತಕ್ಕೆ ಸಹಕಾರ ನೀಡಬೇಕು ಎಂದರು.