ದಾವಣಗೆರೆ: ಲಾಕ್ಡೌನ್ ಆದ ಬಳಿಕ ಟೊಮೆಟೋ ಬೆಳೆದ ರೈತರು ಕಂಗಾಲಾಗಿದ್ದು, ಒಂದೆಡೆ ಬೆಳೆದ ಬೆಳೆಗೆ ಸೂಕ್ತ ದರ ಸಿಗದೇ, ಮತ್ತೊಂದೆಡೆ ಮಾರುಕಟ್ಟೆ ಇಲ್ಲದೆ ಪರದಾಡುವಂತಾಗಿದೆ.
ಹೊನ್ನಾಳಿ, ನ್ಯಾಮತಿ ಸೇರಿದಂತೆ ಹಲವೆಡೆ ಟೊಮೆಟೊ ಬೆಳೆದ ರೈತರು ಬೆಳೆ ನಾಶಪಡಿಸುವ ಸ್ಥಿತಿಗೆ ಬಂದಿದ್ದಾರೆ. ಕಡಿಮೆ ದರಕ್ಕೆ ಟೊಮೊಟೋ ಕೇಳುತ್ತಿರುವುದರಿಂದ ಹಾಕಿದ ಅಸಲು ಇರಲಿ, ತುಂಬಾ ನಷ್ಟ ಅನುಭವಿಸುವಂತಾಗಿದೆ. ಲಾಕ್ಡೌನ್ ಎಫೆಕ್ಟ್ನಿಂದ ಟೊಮೆಟೊ ಬೆಲೆ ಕುಸಿದ ಹಿನ್ನೆಲೆ ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ವೀರೇಶ್ ಎಂಬ ರೈತ ಟೊಮೆಟೋ ಹಣ್ಣನ್ನು ಜಮೀನಿನಲ್ಲಿ ಹಾಗೆಯೇ ಬಿಟ್ಟಿದ್ದರು. ಒಂದು ಎಕರೆ 26 ಗುಂಟೆ ಜಮೀನಿನಲ್ಲಿ ಎರಡು ಲಕ್ಷ ಖರ್ಚು ಮಾಡಿ ತರಕಾರಿ ಬೆಳೆದಿದ್ದರು.
ನೂರಾರು ರೂಪಾಯಿ ಇದ್ದ ಟ್ರೇ ಬೆಲೆ ಇದೀಗ 80 ರೂಪಾಯಿಗೆ ಕುಸಿದಿದ್ದು, ರೈತ ಟೊಮೆಟೋ ಬೆಳೆಯನ್ನು ಮಾರುಕಟ್ಟೆಗೆ ತರಲಾಗದೇ ಹೊಲದಲ್ಲಿ ಹಾಗೆಯೇ ಬಿಡುವ ಪರಿಸ್ಥಿತಿ ಬಂದಿದೆ. ಸದ್ಯ ಅನ್ನದಾತನ ಜಮೀನಿನಲ್ಲಿ ಎರಡು ಟನ್ನಷ್ಟು ಟೊಮೆಟೋ ಇದ್ದು, ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಜಮೀನಿಗೆ ಭೇಟಿ ನೀಡಿ ರೈತನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ, ಎಪಿಎಂಸಿ ಮೂಲಕ ಟೊಮೆಟೋ ಖರೀದಿ ಮಾಡುವಂತೆ ರೇಣುಕಾಚಾರ್ಯ ಸೂಚಿಸಿದ್ದಾರೆ.