ದಾವಣಗೆರೆ: ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಮಧ್ಯೆ ವಿದ್ಯಾರ್ಥಿನಿ ಹಾಲಮ್ಮ ಐದು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. ತಾಯಿಯನ್ನು ಕಳೆದುಕೊಂಡ ಇವರು ಅಜ್ಜಿಯ ಆಸರೆಯಲ್ಲೇ ಬೆಳೆದು ಛಲ ಬಿಡದೆ ಓದಿ ಈ ಸಾಧನೆ ಮಾಡಿದ್ದಾರೆ. ಕೂಲಿ ಮಾಡುತ್ತಿದ್ದ ತಂದೆ ಕಳುಹಿಸಿದ ಹಣದಲ್ಲೇ ಶಿಕ್ಷಣ ಪೂರೈಸಿದ್ದಾರೆ. ವಿಶೇಷ ಅಂದ್ರೆ, ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿನಿಯ ಅಜ್ಜಿ ಇಂದು ನೌಕರಿಯಿಂದ ನಿವೃತ್ತಿಯಾಗಿದ್ದು, ಉನ್ನತ ಶಿಕ್ಷಣ ಪಡೆಯಲು ಕಾರಣಕರ್ತಳಾದ ಅಜ್ಜಿಗೆ ಮೊಮ್ಮಗಳು ತನಗೆ ಸಿಕ್ಕ ಚಿನ್ನದ ಪದಕಗಳನ್ನು ಅರ್ಪಿಸಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ವೆಂಕಟೇಶ್ವರಪುರ ಕ್ಯಾಂಪ್ ನಿವಾಸಿಯಾದ ಹಾಲಮ್ಮ ದಾವಣಗೆರೆ ವಿವಿಯ ಹತ್ತನೇ ಘಟಿಕೋತ್ಸವದಲ್ಲಿ ಐದು ಚಿನ್ನದ ಪದಕಗಳನ್ನು ಸ್ವೀಕರಿಸಿದರು. ಎಂ.ಕಾಂ ವಿಭಾಗದಲ್ಲಿ ಇಡೀ ವಿವಿಗೆ ಮೊದಲ ರ‍್ಯಾಂಕ್ ಬಂದಿರುವ ಇವರು ತನ್ನ ತಂದೆ ಹಾಗು ಅಜ್ಜಿಗೆ ಕೀರ್ತಿ ತಂದಿದ್ದಾರೆ.
ತಂದೆ ಬಸಪ್ಪ ಕೂಲಿ ಮೂಲಕ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಅದರಿಂದ ಉಳಿತಾಯವಾದ ಹಣವನ್ನು ಮಗಳ ಉನ್ನತ ಶಿಕ್ಷಣಕ್ಕಾಗಿ ವ್ಯಯಿಸಿದ್ದಾರೆ. 15 ವರ್ಷಗಳ ಹಿಂದೆ ಇವರು ತಾಯಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ಅಜ್ಜಿಯ ಆಶ್ರಯದಲ್ಲೇ ಬೆಳೆದಿದ್ದಾರೆ. ಚನ್ನಬಸಮ್ಮ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಾ ಮೊಮ್ಮಗಳ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದಾರೆ. ಹಾಲಮ್ಮ ಸರ್ಕಾರಿ ಬಿಸಿಎಂ ಹಾಸ್ಟೆಲ್ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇದೀಗ ಕಠಿಣ ಪರಿಶ್ರಮಕ್ಕೆ ಫಲ ದೊರೆತಿದೆ.
ಇಂದೇ ಅಜ್ಜಿ ಅಂಗನವಾಡಿ ಸಹಾಯಕಿ ಕೆಲಸದಿಂದ ನಿವೃತ್ತರಾಗಿದ್ದಾರೆ. ಹಾಲಮ್ಮ ತನಗೆ ದಕ್ಕಿದ ಚಿನ್ನದ ಪದಕಗಳನ್ನು ತನ್ನ ಪ್ರೀತಿಯ ಅಜ್ಜಿ ಚನ್ನಬಸಮ್ಮಗೆ ಅರ್ಪಿಸಿದ್ದಾರೆ. ಎಂ.ಕಾಂ ಪದವಿಯ ಪ್ರತಿ ಸೆಮಿಸ್ಟರ್ಗಳಲ್ಲಿ ಉತ್ತಮ ಅಂಕ ಪಡೆದು 2022-23ರ ಸಾಲಿನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ಹಾಲಮ್ಮ ಮಾತನಾಡಿ, "ಐದು ಚಿನ್ನದ ಪದಕ ಬಂದಿರುವುದು ಸಂತಸವಾಗಿದೆ. ತಾಯಿಯನ್ನು ಕಳೆದುಕೊಂಡ ನನಗೆ ಅಜ್ಜಿ ಹಾಗು ತಂದೆ ಇಬ್ಬರೂ ಸಾಕಿ ಉನ್ನತ ಶಿಕ್ಷಣ ಕೊಡಿಸಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ಈ ಪದಕಗಳನ್ನು ಅಜ್ಜಿ ಹಾಗು ತಂದೆಗೆ ಅರ್ಪಿಸಿದ್ದೇನೆ. ಕೆ-ಸೆಟ್ ಕ್ಲಿಯರ್ ಮಾಡುವ ಮೂಲಕ ಪಿಹೆಚ್ಡಿ ಮಾಡುವ ಆಸೆ ಇದೆ" ಎಂದು ಹೇಳಿದರು.
![Arun Sharma who got first rank in Biochemistry](https://etvbharatimages.akamaized.net/etvbharat/prod-images/17870488_meg.jpg)
ಅರುಣ್ ಶರ್ಮಾಗೆ 5 ಚಿನ್ನ: ಸ್ನಾತಕೋತ್ತರ ಜೀವರಸಾಯನ ಶಾಸ್ತ್ರ ವಿಭಾಗದ ಕೆ.ಅರುಣ್ ಶರ್ಮಾ ಮೊದಲ ರ‍್ಯಾಂಕ್ ಪಡೆದು ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ತಂದೆ ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಷ್ಟವಿದ್ದರೂ ಉನ್ನತ ವ್ಯಾಸಂಗ ಮಾಡಿದ್ದಾರೆ. ಪದಕಗಳನ್ನು ಪೋಷಕರಿಗೆ ಅರ್ಪಿಸಿದ್ದಾರೆ.
ಇದನ್ನೂ ಓದಿ: ಸಿವಿಲ್ ಡಿಪ್ಲೊಮಾದಲ್ಲಿ ರಾಜ್ಯಕ್ಕೆ ಫಸ್ಟ್ ರ‍್ಯಾಂಕ್ ಪಡೆದ ಶಿರಸಿಯ 71ರ ಉತ್ಸಾಹಿ!