ದಾವಣಗೆರೆ: ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ರಾಜ್ಯದ ಜನರ ಆಕ್ರೋಶಕ್ಕೆ ಕಾರಣ ಆಗಿದೆ. ರಾಜಕೀಯ ವಲಯದಲ್ಲಿ ಕೂಡ ಬಿರುಗಾಳಿ ಎಬ್ಬಿಸಿದೆ. ಅದರೆ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಸಾಹೇಬರು ಮಾತ್ರ ನನಗೆ ಇದರ ಬಗ್ಗೆ ಗೊತ್ತೇ ಇಲ್ಲ ಎಂದು ನುಣಿಚಿಕೊಳ್ಳುವ ಯತ್ನ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ರೇಪ್ ನಡೆದ್ರೇ ನನ್ನನ್ನು ಯಾಕೆ ಕೇಳ್ತಿರಪ್ಪೋ ಎಂದು ಉತ್ತರ ನೀಡುವ ಮೂಲಕ ಜನರ ಆಕ್ರೋಶಕ್ಕೆ ಕಾರಣರಾದರು. ಇನ್ನು ನಾನು ಏನೂ ನೋಡಿಲ್ಲಪ್ಪಾ, ನಮ್ಮ ಜಿಲ್ಲೆಯಲ್ಲಿ ಏನಾದರೂ ಆಗಿದ್ರೇ ಕೇಳು ಅದಕ್ಕೆ ಖಂಡಿತವಾಗಿ ಉತ್ತರಿಸಿ ಅಧಿಕಾರಿಗಳಿ ಹೇಳಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಓದಿ-ಮೈಸೂರು ವಿದ್ಯಾರ್ಥಿ ಗ್ಯಾಂಗ್ ರೇಪ್ ಕೇಸ್ : ರಾಷ್ಟ್ರೀಯ ಮಹಿಳಾ ಹಾಕಿ ಕೋಚ್ ಪ್ರತಿಕ್ರಿಯೆ
ಮೈಸೂರಿನಲ್ಲಾಗಿರುವುದರ ಬಗ್ಗೆ ನನಗೆ ಏನ್ ಗೊತ್ತಿಲ್ಲ. ನಾನು ಟಿವಿ ನೋಡದೇ ಬದುಕು ಸಾಗಿಸುತ್ತೇನೆ, ಬೆಳಗ್ಗೆ ಎದ್ದು ಬದುಕು ನೋಡಿಕೊಂಡ್ರೇ ಸಂಜೆ ಹೋಗಿ ಮಲಗಿಕೊಂಡರೇ ಸಾಕಾಗಿ ಹೋಗುತ್ತದೆ. ನನಗೆ ರೇಪು ಗೊತ್ತಿಲ್ಲ ಏನೂ ಗೊತ್ತಿಲ್ಲ, ಬೇರೆ ವಿಚಾರ ಇದ್ರೇ ಕೇಳಿ ಎಂದು ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ.