ದಾವಣಗೆರೆ: ಮುಂಬರುವ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಯ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವಂತೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಕೇಳುತ್ತೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರು ಮಂದಿ ಬಿಜೆಪಿ ಶಾಸಕರಿದ್ದು, ಇಂಥವರಿಗೆಯೇ ಕೊಡಿ ಎಂದು ಹೇಳಲ್ಲ. ನಾವೆಲ್ಲರೂ ಕುಳಿತು ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಭೈರತಿ ಬಸವರಾಜ್ ಉಸ್ತವಾರಿ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ, ಪಟ್ಟು ಹಿಡಿದಿಲ್ಲ ಎಂದರು.
ಬಿಜೆಪಿಯಲ್ಲಿ ವಿಧಾನ ಪರಿಷತ್ ಟಿಕೆಟ್ಗೆ ಪೈಪೋಟಿ ಏರ್ಪಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಂಟಿಬಿ, ಹೆಚ್.ವಿಶ್ವನಾಥ್ ಎಂಎಲ್ಸಿ ಮಾಡಿ ಎಂದು ಕೇಳಿದ್ದಾರೆ. ಸರ್ಕಾರ ರಚನೆಗೆ ಸಹಕಾರ ಕೊಟ್ಬವರಿಗೆ ಮಂತ್ರಿ ಮಾಡಲಾಗಿದೆ. ಇವರ ಸ್ಪರ್ಧೆಗೂ ಅವಕಾಶ ಕೊಡಲಾಗಿತ್ತು. ಆದರೆ ಸೋತರು. ಇವರಿಗೆ ಸ್ಥಾನ ನೀಡುವ ಕುರಿತು ಬಿಎಸ್ವೈ ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.
ಡಿಕೆಶಿ ಬಿಜೆಪಿಯ ಓರ್ವ ಕಾರ್ಯಕರ್ತನಿಗೆ ಸಮ:
ಡಿ.ಕೆ.ಶಿವಕುಮಾರ್ ಬಗ್ಗೆ ನಮಗೆ ಹೆದರಿಕೆ ಇಲ್ಲ. ಡಿಕೆಶಿ ಬಿಜೆಪಿಯ ಓರ್ವ ಕಾರ್ಯಕರ್ತನಿಗೆ ಸಮ. ಕೆಪಿಸಿಸಿ ಅಧ್ಯಕ್ಷರ ಪದಗ್ರಹಣಕ್ಕೆ ಸರ್ಕಾರ ಅಡ್ಡಿಪಡಿಸುತ್ತಿಲ್ಲ. ಶಿವಕುಮಾರ್ ಮಾಡುತ್ತಿರುವ ಆರೋಪ ನೋಡಿದರೆ ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ ಎನ್ನುವಂತಾಗಿದೆ. ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯಸಭೆಗೆ ಕಾರ್ಯಕರ್ತರಿಗೆ ಟಿಕೆಟ್ ನೀಡಿದೆ. ಆದರೆ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ದೇವೇಗೌಡರನ್ನು ಆಯ್ಕೆ ಮಾಡಿವೆ. ಈ ವಿಚಾರದಲ್ಲಿ ಇಡೀ ರಾಜ್ಯಕ್ಕೆ ಬಿಜೆಪಿ ಮಾದರಿಯಾಗಿದೆ ಎಂದರು.