ದಾವಣಗೆರೆ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ಕೋರ್ಟ್ ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ರಂಗಾಪುರ ಗ್ರಾಮದ ರಮೇಶ್, ವಿಜಯ್, ಅರುಣ್ ಶಿಕ್ಷೆಗೆ ಒಳಗಾದ ಕಾಮುಕರು.
ಪ್ರಕರಣ ವಿವರ:
ಜಿಲ್ಲೆಯ ಚನ್ನಗಿರಿ ತಾಲೂಕಿನ ಅಮ್ಮನಗುಡ್ಡಕ್ಕೆ ಮೂವರು ಆರೋಪಿಗಳು ತಮ್ಮ ಊರಿನಿಂದ 16 ವರ್ಷದ ಬಾಲಕಿಯನ್ನು 2017 ರ ಮೇ ತಿಂಗಳ 30 ನೇ ತಾರೀಖಿನಂದು ಕರೆದೊಯ್ದಿದ್ರು. ಬಾಲಕಿ ಮೇಲೆ ಮೊದಲು ರಮೇಶ್ ಅತ್ಯಾಚಾರ ನಡೆಸಿದ್ದ. ಈ ದೃಶ್ಯವನ್ನು ಉಳಿದಿಬ್ಬರು ಮೊಬೈಲ್ನಲ್ಲಿ ಶೂಟಿಂಗ್ ಮಾಡಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಅರುಣ್ ಮತ್ತು ವಿಜಯ್ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದರು.
ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆಗಿನ ಪಿಎಸ್ಐ ಆರ್.ಆರ್. ಪಾಟೀಲ್ ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗಶ್ರೀ ಅವರು, ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತದಲ್ಲಿ 50 ಸಾವಿರ ರೂಪಾಯಿಯನ್ನು ಸಂತ್ರಸ್ತೆಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆಂಚಪ್ಪ ವಾದ ಮಂಡಿಸಿದ್ದರು.