ದಾವಣಗೆರೆ: ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪಕ್ಕೆ ಗುರಿಯಾಗಿ, ಲಿಂಗಾಯತ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದ ಡಾ. ವೈ. ರಾಮಪ್ಪ ಅವರ ಮನೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ನಗರದ ತರಳುಬಾಳು ಬಡಾವಣೆಯಲ್ಲಿನ ಮನೆಯಲ್ಲಿ ಡಾ. ರಾಮಪ್ಪ ವಾಸವಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ನೇರ್ಲಗಿ ಗ್ರಾಮದಲ್ಲಿ ಲಿಂಗಾಯತ ಮುಖಂಡರ ಕುರಿತಾಗಿ ಮಾತನಾಡಿದ್ದರು. ರಾಮಪ್ಪ ನಡೆ ಖಂಡಿಸಿ ನಿನ್ನೆ ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಸಮಾಜದವರು ಪ್ರತಿಭಟನೆ ನಡೆಸಿದ್ದರು.
ಮಾತ್ರವಲ್ಲ, ರಾಮಪ್ಪ ಪತ್ರಿಕಾಗೋಷ್ಠಿ ನಡೆಸಿ ನಾನು ಯಾವ ಸಮಾಜದ ಬಗ್ಗೆ ಅವಹೇಳನ ಮಾಡಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿಯೇ ಹೇಳಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಮಪ್ಪ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡದ ರೀತಿಯಲ್ಲಿ ಭದ್ರತೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.