ದಾವಣಗೆರೆ: ರೈತರಿಗೆ ನೀಡಬೇಕಿದ್ದ ಬೆಳೆ ವಿಮೆ ಹಣ ನೀಡದೇ ಜಿಲ್ಲಾ ವ್ಯವಸಾಯ ಸಹಕಾರ ಸೇವಾ ಸಂಘ ವಂಚಿಸಿದೆ ಎಂದು ಆರೋಪಿಸಿ ಹರಪನಹಳ್ಳಿ ತಾಲೂಕಿನ ರೈತರು ಪ್ರತಿಭಟನೆ ನಡೆಸಿದ್ದಾರೆ.
ರೈತರಿಗಾಗಿ ಸರ್ಕಾರ ಬೆಳೆ ವಿಮೆ ಹಣ ಬಿಡುಗಡೆ ಮಾಡಿದೆ. ಆದ್ರೆ ಹರಪನಹಳ್ಳಿ ತಾಲೂಕಿನ ವ್ಯವಸಾಯ ಸೇವಾ ಪತ್ತಿನ ಸಹಕಾರ ಸಂಘ ಹಣ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಬೆಳೆ ವಿಮೆ ಯೋಜನೆ ಜಾರಿಗೆ ತಂದಿವೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಯಾದರೆ ರೈತರು ವಿಮೆ ಮಾಡಿಸಿದ್ದರೆ ಹಣ ಬರುತ್ತದೆ. ಆದ್ರೆ, ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಹೆಸರಿಗಷ್ಟೇ ಬೆಳೆ ವಿಮೆ. ಸರ್ಕಾರದಿಂದ ಬಂದ ಹಣವನ್ನು ಅಧಿಕಾರಿಗಳೇ ನುಂಗಿ ಹಾಕಿದ್ದು, ಸುಮಾರು 7 ಹಳ್ಳಿಗಳ ನೂರಕ್ಕೂ ಅಧಿಕ ರೈತರ ಬೆಳೆ ವಿಮೆ ಹಣವನ್ನ ಆಡಳಿತ ಮಂಡಳಿ ದುರುಪಯೋಗ ಮಾಡಿಕೊಂಡಿದೆ ಎಂದು ರೈತರು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ಅಧಿಕಾರಿ ಸತೀಶ್ ಪ್ರತಿಕ್ರಿಯಿಸಿ, ಈ ಬಗ್ಗೆ ನಮ್ಮ ಗಮನಕ್ಕೆ ಲಿಖಿತ ರೂಪದಲ್ಲಿ ಯಾವ ರೈತರೂ ದೂರು ನೀಡಿಲ್ಲ. ಮೋಸಕ್ಕೊಳಗಾದ ರೈತರು ದೂರು ಸಲ್ಲಿಸಿದರೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರಂತೆ.