ದಾವಣಗೆರೆ : ನಾನೂ ಹಿಂದೂ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಹಿಂದೂ ಎಂಬ ಭಾವನೆ ಅವರಿಗೆ ಬಂದಿರುವುದು ಸಂತೋಷದ ವಿಚಾರ ಎಂದು ಜೆಡಿಎಸ್ ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತರ ಮತಗಳಿಗಾಗಿ ಓಲೈಕೆ ಮಾಡುವುದು ಇದೆ. ಅದರೂ ನಾನು ಹಿಂದು ಎಂಬ ಭಾವನೆ ಡಿಕೆಶಿಗೆ ಬಂದಿದೆಯಲ್ಲ. ಅದಕ್ಕೆ ನಾವು ಸಂತೋಷ ಪಡಬೇಕಾಗಿದೆ. ಈ ದೇಶದಲ್ಲಿರುವ ಎಲ್ಲರೂ ಹಿಂದೂಗಳೇ ಎಂದು ನಾವು ಹೇಳುತ್ತೇವೆ ಎಂದರು.
ನಮ್ಮ ಮನೆಗೂ ಮಂತ್ರಾಕ್ಷತೆ ಬಂದಿದೆ. ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಅಹ್ವಾನ ಬಂದಿಲ್ಲ ಎಂದರೂ ಕೂಡ ನಮ್ಮ ದೇಶದ ಪರಂಪರೆಯಲ್ಲಿ ತೀರ್ಥ ಕ್ಷೇತ್ರಗಳಿಗೆ ಹೋಗುವ ಪದ್ಧತಿಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ದೇಶದ ಪ್ರತಿಯೊಬ್ಬರು ರಾಮ ಮಂದಿರಕ್ಕೆ ಹೋಗಿ ಬರಲಿದ್ದಾರೆ. ನಮ್ಮ ಸಮುದಾಯದ ಕೂಡಲಸಂಗಮ ಪೀಠಾಧ್ಯಕ್ಷ ಬಸವ ಜಯಮೃತುಂಜಯ ಸ್ವಾಮೀಜಿಯವರಿಗೂ ಅಯೋಧ್ಯೆಯಿಂದ ಅಹ್ವಾನ ಬಂದಿದೆ. ಅದರಲ್ಲಿ ಸೀಟ್ ನಂಬರ್ 7 ನಲ್ಲಿ ಕೂರಬೇಕೆಂದು ಸೂಚಿಸಲಾಗಿದೆ ಎಂದು ಹೆಚ್ ಎಸ್ ಶಿವಶಂಕರ್ ತಿಳಿಸಿದರು.
ಕಳೆದ ವರ್ಷ ಡಿಸೆಂಬರ್ 9 ರ ಶನಿವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ವೇಳೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಜೈ ಶ್ರೀರಾಮ್ ಎಂದಿದ್ದರು. ಈಗ ನಮಗೆ ಒಮ್ಮೆಲೇ ಜೈ ಶ್ರೀ ರಾಮ್ ಎಂದು ಕೂಗು ಅಂದರೆ ಹೇಗೆ? ನಾವೆಲ್ಲ ಜೈ ಶ್ರೀರಾಮ್ ಎಂದು ಕೂಗಲು ನಮ್ಮನ್ನು ಮೊದಲು ಅಯೋಧ್ಯೆಗೆ ಕರೆದುಕೊಂಡು ಹೋಗಿ. ಅಲ್ಲಿ ಪವರ್ ಬಂದ ಮೇಲೆ ನಾವು ಜೈ ಶ್ರೀರಾಮ್ ಎಂದು ಕೂಗುತ್ತೇವೆ ಎಂದು ಹೆಚ್ ಎಸ್ ಶಿವಶಂಕರ್ ಹೇಳಿದರು.
ಕಾಂಗ್ರೆಸ್ ನವರು ರಾಮ ಮಂದಿರವನ್ನು ವಿರೋಧಿಸುತ್ತಿದ್ದಾರೆ. ಅದರೇ ಅವರ ಪಕ್ಷದ ನಾಯಕ ರಾಹುಲ್ ಗಾಂಧಿ ಇಷ್ಟಲಿಂಗ ಪೂಜೆ ಮಾಡಿದರು. ಒಡಿಶಾದ ಪುರಿ ಜಗನ್ನಾಥ್ ದೇವಾಲಯ, ಅಜ್ಮೇರ್ ಗೆ ಹೋಗಿ ಬಂದಿದ್ದಾರೆ. ಆದರೇ ಅಲ್ಪಸಂಖ್ಯಾತರನ್ನು ಒಲೈಕೆ ಮಾಡುವುದಕ್ಕೆ ಕಾಂಗ್ರೆಸ್ ನವರು ರಾಮ ಮಂದಿರವನ್ನು ವಿರೋಧ ಮಾಡುತ್ತಿದ್ದು, ಇದೀಗ ಕಾಲ ಬದಲಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಸೇರಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಈ ಬಾರಿ ರಾಜ್ಯದಲ್ಲಿ ಐತಿಹಾಸಿಕ ಚುನಾವಣೆ ನಡೆಯಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ : ಸೋಲಿನ ಭೀತಿಯಿಂದ ರಾಮಮಂದಿರದ ಬಗ್ಗೆ ಕಾಂಗ್ರೆಸ್ ಆರೋಪ : ನಿಖಿಲ್ ಕುಮಾರಸ್ವಾಮಿ