ದಾವಣಗೆರೆ: ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಎಂಬ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಹರಿಪ್ರಸಾದ್ ಅವರು ತಮ್ಮ ನಾಯಕರನ್ನು ಮೆಚ್ಚಿಸಲು ಇಂಥ ಕೀಳು ಮಟ್ಟದ ಹೇಳಿಕೆಯನ್ನು ನೀಡುತ್ತಾರೆ ಎಂದು ತಿರುಗೇಟು ಕೊಟ್ಟರು.
ದಾವಣಗೆರೆಯಲ್ಲಿ ಏರ್ಪಡಿಸಿರುವ 24ನೇ ವೀರಶೈವ ಲಿಂಗಾಯತ ಮಹಾಅಧಿವೇಶನದಲ್ಲಿ ಭಾಗವಹಿಸುವ ಮುನ್ನ ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದ್ ಅವರ ಸ್ಥಿತಿ ಶೋಚನೀಯವಾಗಿದೆ. ಈ ಹೇಳಿಕೆಯಲ್ಲಿ ಅವರ ಬುದ್ಧಿಮಟ್ಟ ಕಾಣಿಸುತ್ತಿದೆ. ಈ ದೇಶದಿಂದ ಕಾಂಗ್ರೆಸ್ ನಿರ್ಗಮನವಾಗುವ ಪಾರ್ಟಿ. ಹರಿಪ್ರಸಾದ್ ಅವರಂಥವರು ಲೀಡರ್ ಆಗಿರೋದ್ರಿಂದ ಈ ಪರಿಸ್ಥಿತಿ ಬಂದಿದೆ ಎಂದರು.
ಸ್ವಾತಂತ್ರ್ಯ ಹೋರಾಟಕ್ಕೆ ಅನೇಕರು ತ್ಯಾಗ ಮಾಡಿದ್ದಾರೆ. ಭಗತ್ ಸಿಂಗ್, ಝಾನ್ಸಿರಾಣಿ, ಕಿತ್ತೂರು ಚೆನ್ನಮ್ಮರಿಂದ ಹೋರಾಟ ಶುರು ಆಗಿದೆ. ಸ್ವಾತಂತ್ರ್ಯ ಹೋರಾಟದ ಲಾಭ ಪಡೆದವರು ಕಾಂಗ್ರೆಸ್‌ನವರು. ಈ ಹೋರಾಟದಲ್ಲಿ ಕಾಂಗ್ರೆಸ್‌ನವರು ಯಾರೂ ಆಸ್ತಿ ಹಾಳು ಮಾಡಿಕೊಂಡಿಲ್ಲ, ಜೈಲಿಗೂ ಹೋಗಿಲ್ಲ ಎಂದು ಟೀಕಿಸಿದರು.
ಬ್ರಿಟೀಷರ ಬೀಜ ಇನ್ನೂ ಜೀವಂತ: ನಿಜವಾದ ಹೋರಾಟ ಮಾಡಿದವರೇ ಬೇರೆ. ಸುಭಾಷ್ ಚಂದ್ರ ಬೋಸ್, ಲಾಲಾ ಲಜಪತ್ ರಾಯ್ ಕಾಂಗ್ರೆಸ್ ಬಿಟ್ಟರು. ಸ್ವಾತಂತ್ರ್ಯ ಹೋರಾಟಕ್ಕೆ 200 ವರ್ಷದ ಇತಿಹಾಸವಿದೆ. ಕಾಂಗ್ರೆಸ್ ಹುಟ್ಟಿದ್ದು ಮೊನ್ನೆ ಮೊನ್ನೆ. ಇತಿಹಾಸ ತಿರುಚುವ ಕೆಲಸ ಕಾಂಗ್ರೆಸ್ ಮಾಡಿದೆ. ಬ್ರಿಟೀಷರ ಬೀಜ ಇನ್ನೂ ಜೀವಂತ ಇದ್ದರೆ ಅದು ಕಾಂಗ್ರೆಸ್‌ನಿಂದ ಎಂದು ಟಾಂಗ್ ಕೊಟ್ಟರು.
ಹರಿಪ್ರಸಾದ್ರದ್ದು ದುರಹಂಕಾರಿ ಹೇಳಿಕೆ-ಬಿ.ವೈ.ವಿಜಯೇಂದ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಅವರದ್ದು ದುರಹಂಕಾರಿ ಹೇಳಿಕೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಿಯೊಬ್ಬ ಸ್ವಾಭಿಮಾನಿ ಕಾರ್ಯಕರ್ತನೂ ನಿಮ್ಮ ಹೇಳಿಕೆಗೆ ಉತ್ತರ ಕೊಡ್ತಾನೆ. ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟ ಆಗಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡ್ತೇವೆ ಎಂದು ತಿಳಿಸಿದರು.
ಅಧಿಕಾರದ ಅಮಲಿನಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ಅವರ ಪಕ್ಷದ ಮುಖಂಡರು ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ನಿಮ್ಮ ನಡವಳಿಕೆಗೆ ಯಾವ ರೀತಿ ಶಾಸ್ತಿ ಆಗಲಿದೆ ಅನ್ನೋದನ್ನು ಕಾದು ನೋಡಿ. ಮುಂದಿನ ಚುನಾವಣೆಯಲ್ಲಿ ನಮ್ಮ ಪ್ರತಿ ಕಾರ್ಯಕರ್ತರೂ ಆಂಜನೇಯನ ರೀತಿ ಮೋದಿ ಸೇವೆ ಮಾಡಬೇಕು ಅಂತಿದ್ದಾರೆ. ಮತ್ತೆ ಮೋದಿ ಪ್ರಧಾನಿಯಾಗಲು ಶಕ್ತಿ ತುಂಬುವ ಪ್ರತಿಜ್ಞೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂಓದಿ: ಬಿಜೆಪಿಯವರು ಗೋಡ್ಸೆ ಅನುಯಾಯಿಗಳು, ಅವರಿಂದ ಏನೂ ನಿರೀಕ್ಷಿಸಲಾಗದು: ಬಿ.ಕೆ.ಹರಿಪ್ರಸಾದ್