ದಾವಣಗೆರೆ: ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆ, ಗಾಳಿಯಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಗಾಳಿ ಮಳೆಯಿಂದಾಗಿ ಬೆವರು ಸುರಿಸಿ ಬೆಳೆದಿದ್ದ ಬಾಳೆ ಗಿಡಗಳು ಸಂಪೂರ್ಣ ನೆಲಕ್ಕಚ್ಚಿರುವ ಘಟನೆ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿನ ಉಚ್ಚಂಗಿದುರ್ಗದಲ್ಲಿ ನಡೆದಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೀಡಾಗಿದ್ದರು. ಈ ನಡುವೆ ಅಕಾಲಿಕ ಮಳೆಯಿಂದಾಗಿ ಬೆಳೆ ಸಂಪುರ್ಣ ನಾಶವಾಗಿದೆ.
ಸುಮಾರು 3 ಎಕರೆಯಲ್ಲಿ ಬೆಳೆದ ಬಾಳೆ ಇನ್ನೂ ಚಿಗುರೊಡೆಯುವ ಹಂತದಲ್ಲಿದೆ. ಬಾಳೆ ಕೈಗೆ ಸೇರುವ ಮುಂಚೆ ಮಣ್ಣು ಸೇರಿದ್ದು ತುಂಬಾ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇನ್ನು ದಾವಣಗೆರೆ ತಾಲೂಕಿನ ಕಡ್ಲೇಬಾಳು, ಅರಸಾಪುರ, ಕಕ್ಕರಗೊಳ್ಳ ಗ್ರಾಮ ಸೇರಿದಂತೆ ಹಲವೆಡೆ ಭತ್ತ ನಾಶವಾಗಿದ್ದು, ಅನ್ನದಾತರು ಕಂಗಾಲಾಗಿದ್ದಾರೆ.