ದಾವಣಗೆರೆ: ಭದ್ರಾ ನೀರು ಹರಿಸುವಂತೆ ಭಾರತೀಯ ರೈತ ಒಕ್ಕೂಟದಿಂದ ರೈತರು ಇಂದು ದಾವಣಗೆರೆ ಬಂದ್ ನಡೆಸುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಬಂದ್ ಜಾರಿಯಲ್ಲಿದ್ದು, ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. 100 ದಿನಗಳ ಕಾಲ ನಿರಂತರವಾಗಿ ಭದ್ರಾ ನೀರು ಬಿಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ರೈತರಿಗೆ ಬಿಜೆಪಿ ಜಿಲ್ಲಾ ಘಟಕ ಬೆಂಬಲ ನೀಡಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ತಕ್ಷಣವೇ ನೀರು ಹರಿಸುವಂತೆ ರೈತರು ಮನವಿ ಮಾಡಿದ್ದಾರೆ. ನಗರದ ಜಯದೇವ ವೃತ್ತದಲ್ಲಿ ರೈತ ಮುಖಂಡ ನಾಗೇಶ್ವರ್ ರಾವ್ ಹಾಗೂ ಬಸವರಾಜಪ್ಪನವರ ನೇತೃತ್ವದಲ್ಲಿ ಜಮಾಯಿಸಿದ ರೈತರು, ನೀರು ಹರಿಸುವಂತೆ ಸರ್ಕಾರವನ್ನು ಆಗ್ರಹಿಸಿ, ಧಿಕ್ಕಾರ ಕೂಗಿದರು.
ಎಎಪಿ, ಆಟೋ-ಬಸ್ ಮಾಲೀಕರ ಸಂಘ, ರಸಗೊಬ್ಬರ ಅಂಗಡಿ ಮಾಲೀಕರ ಸಂಘ, ರೈಸ್ ಮಿಲ್ ಮಾಲೀಕರ ಸಂಘ ಸೇರಿದಂತೆ ಹಲವರು ಬಂದ್ ಬೆಂಬಲಿಸಿದ್ದಾರೆ. ಕೆಲವು ಆಟೋ, ಬಸ್ಗಳು ರಸ್ತೆಗಿಳಿದಿದ್ದವು. ನಗರದಲ್ಲಿ ಹೂವಿನ ಮಾರುಕಟ್ಟೆ ತೆರೆದಿತ್ತು. ರಸ್ತೆಗಳಿದಿದ್ದ ಆಟೋ ಚಾಲಕರಿಗೆ ಬೆಂಬಲ ಸೂಚಿಸುವಂತೆ ರೈತರು ಮನವಿ ಮಾಡಿದರು.
ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರಾದ್ಯಂತ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಎಸ್ಪಿ ಉಮಾ ಪ್ರಶಾಂತ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ರೈತ ಮುಖಂಡ ನಾಗೇಶ್ವರ್ ಪ್ರತಿಕ್ರಿಯಿಸಿ, "ನೀರಿಗಾಗಿ ಬಂದ್ ಮಾಡಿದ್ದಕ್ಕೆ ಎರಡು ಸಾವಿರ ಕೋಟಿ ರೂ ಬಂಡವಾಳ ನಷ್ಟ ಆಗುತ್ತೆ. ಈ ಬಂದ್ಗೆ ಎಲ್ರೂ ಕೈ ಜೋಡಿಸಿದ್ದಾರೆ. ನೀರು ಬಿಡುವ ತನಕ ನಾವು ಜಗ್ಗಲ್ಲ. ಚಳುವಳಿ ನಿಲ್ಲಿಸುವ ಮಾತೇ ಇಲ್ಲ" ಎಂದು ಪಟ್ಟು ಹಿಡಿದರು.
ರಾಜೇಶ್ವರಿ ಮಾತನಾಡಿ, "ನಮ್ಮ ಬೆಳೆಗಳು ನಷ್ಟವಾಗುತ್ತಿವೆ. ನಮ್ಮ ಅಣ್ಣಂದಿರು ಹೊಲದಲ್ಲಿ ಕಷ್ಟಪಡುತ್ತಿದ್ದಾರೆ. ಶಾಲಾ ಶುಲ್ಕ ಹೇಗೆ ಕಟ್ಟಬೇಕು?. ನಮಗೆ ನೀರು ಕೊಡಿ. ಅಷ್ಟೇ ಅಲ್ಲ, ಕಾವೇರಿ ನದಿ ನೀರನ್ನೂ ಬೇರೆ ರಾಜ್ಯಕ್ಕೆ ಹರಿಸಬಾರದು" ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಅಂಗಡಿಯಲ್ಲಿದ್ದ ಹಣ್ಣುಗಳನ್ನ ಬಿಸಾಕಿ ದೌರ್ಜನ್ಯ ಆರೋಪ: ಬಂದ್ ವೇಳೆ ಬಿಜೆಪಿಯ ಮಾಜಿ ಮೇಯರ್ ಅಜಯ್ ಕುಮಾರ್ ದಬ್ಬಾಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಒತ್ತಾಯ ಪೂರ್ವಕವಾಗಿ ಹಣ್ಣಿನ ಅಂಗಡಿಯಲ್ಲಿದ್ದ ಹಣ್ಣುಗಳನ್ನು ಬಿಸಾಕಿ ದೌರ್ಜನ್ಯ ಎಸಗಿರುವ ದೃಶ್ಯಗಳು ಮೊಬೈಲ್ ಸೆರೆಯಾಗಿದೆ. ಪ್ರತಿಭಟನೆ ವೇಳೆ ಅಂಗಡಿ ಬಂದ್ ಮಾಡುವಂತೆ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿ ಪ್ರತಿಭಟನೆ ಮಾಡುವ ವೇಳೆ ಬಿಜೆಪಿ ನಾಯಕ ಅಜಯ್ ಕುಮಾರ್ ಅವರು ರೈತರೊಂದಿಗೆ ಸೇರಿಕೊಂಡು ಅಂಗಡಿ ಬಂದ್ ಮಾಡಿಸಿರುವ ಘಟನೆ ಕಂಡು ಬಂದಿದೆ. ಭದ್ರಾ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ಇಂದು ಬಂದ್ಗೆ ಕರೆ ನೀಡಿತ್ತು. ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಅಂಗಡಿ ಬಂದ್ ಮಾಡಿಸಿದರು ಎಂಬ ಆರೋಪ ಇದೆ. ಇನ್ನು ದಾವಣಗೆರೆ ಬಂದ್ಗೆ ರೈತರು ಮತ್ತು ಬಿಜೆಪಿಗರು ಬೆಂಬಲಿಸಿದರು. ದಾವಣಗೆರೆ ನಗರದಾದ್ಯಂತ ಬೈಕ್ ರ್ಯಾಲಿ ಮೂಲಕ ಪ್ರಟಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಕುಸಿದು ಬಿದ್ದ ರೈತ ಮುಖಂಡ: ಪ್ರತಿಭಟನೆ ಮಾಡುವಾಗ ರೈತ ಮುಖಂಡ ನಾಗೇಶರಾವ್ ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಂಧಿ ವೃತ್ತದಲ್ಲಿ ಟೈರ್ ಸುಟ್ಟು ರೈತರ ಆಕ್ರೋಶ: ದಾವಣಗೆರೆ ಬಂದ್ ಹಿನ್ನೆಲೆ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದ್ದು, ಆಟೋ-ಬಸ್ ಓಡಾಟ ಸಾಮಾನ್ಯವಾಗಿದೆ. ಭದ್ರಾ ನೀರು ಹರಿಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ರೈತರು ಪ್ರತಿಭಟನೆ ಮಾಡಿದರು ಕೂಡ ಸರ್ಕಾರ ಕ್ಯಾರೆ ಎನ್ನದ ಹಿನ್ನೆಲೆ ಗಾಂಧಿ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ: ಬಂದ್ ಹಿನ್ನೆಲೆ ದಾವಣಗೆರೆ ತಾಲೂಕಿನ ವಿವಿಧ ಹಳ್ಳಿಗಳಿಂದ ಬಸ್ ಹತ್ತಿ ಬರುವ ವಿದ್ಯಾರ್ಥಿಗಳು ದಾವಣಗೆರೆ ಹೊರವಲಯದಿಂದಲೇ ಕಿಮೀ ಗಟ್ಟಲೆ ನಡೆದುಕೊಂಡೇ ಕಾಲೇಜಿಗೆ ತಲುಪುವ ಪರಿಸ್ಥಿತಿ ನಿರ್ಮಾಣ ಆಗಿತ್ತು.
ಇದನ್ನೂ ಓದಿ: ಕಾವೇರಿ ನೀರು ಹಂಚಿಕೆಗೆ ಶಾಶ್ವತ ಸಂಕಷ್ಟ ಸೂತ್ರ ರಚಿಸಿ: ಪ್ರಾಧಿಕಾರಕ್ಕೆ ಎಂಎಲ್ಸಿ ಗೂಳಿಗೌಡ ಪತ್ರ