ದಾವಣಗೆರೆ : ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯ ರದ್ದುಗೊಳಿಸುವ ಮೂಲಕ ಹೊಸ ವೇಳಾಪಟ್ಟಿ ಘೋಷಣೆ ಮಾಡಿದ್ದನ್ನು ವಿರೋಧಿಸಿ, ಹೆಚ್ಚು ನೀರು ಹರಿಸುವಂತೆ ದಾವಣಗೆರೆ ರೈತರು ಬೀದಿಗಿಳಿದು ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡಿದರು.
ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗಿಯಾಗಿ ಭದ್ರಾ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು. ಇನ್ನು ಪ್ರತಿಭಟನೆ ಮಾಡಿದ್ದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿ ಸಂಚಾರ ಅಸ್ತವ್ಯಸ್ತ ಆಗಿತ್ತು. ಇನ್ನು ಭದ್ರಾ ಜಲಾಶಯದ ಸೂಪರ್ ಇಂಡೆಂಟ್ ಇಂಜಿನಿಯರ್ ಸುಜಾತ ಅವರು ಹೊಸ ವೇಳಾಪಟ್ಟಿಯನ್ನು ಘೋಷಣೆ ಮಾಡಿದ್ದರಿಂದ ದಾವಣಗೆರೆ ರೈತರು ಹಿಡಿಶಾಪ ಹಾಕಿದರು. ಇದಲ್ಲದೇ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯವನ್ನು ರದ್ದುಗೊಳಿಸಿರುವುದು ತುಘಲಕ್ ದರ್ಬಾರ್ ಆಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಬಳಿಕ ರೈತರು ಎಸಿ ಕಚೇರಿ ಬಳಿ ಜಮಾಯಿಸಿ ಎಸಿಯವರಿಗೆ ಮನವಿ ಸಲ್ಲಿಸಿದರು.
ಕೆಂಡಾಮಂಡಲರಾದ ರೈತರು ಹೇಳಿದ್ದೇನು: ಈ ವೇಳೆ, ರೈತ ಮುಖಂಡ ಕೊಳೆನಹಳ್ಳಿ ಸತೀಶ್ ಅವರು ಪ್ರತಿಕ್ರಿಯಿಸಿ, "ಅವರ ಮನಸ್ಸಿಗೆ ಬಂದಂತೆ ನೀರು ಹರಿಸುವ ವೇಳಾಪಟ್ಟಿಯನ್ನು ಬದಲಾವಣೆ ಮಾಡುತ್ತಾರೆ. ದಾವಣಗೆರೆ ಜಿಲ್ಲೆಯ ರೈತರು ಏನಾದರೂ ಕೇಳಿದ್ರೆ ಕಾನೂನು ಹೇಳುತ್ತಾರೆ. ಹೊಸ ವೇಳಾಪಟ್ಟಿ ಪ್ರಕಾರ, ಭದ್ರಾ ಎಡದಂಡೆಗೆ ಅಂದ್ರೆ ಭದ್ರಾವತಿ - ತರೀಕೆರೆ ವಿಭಾಗಕ್ಕೆ ಜನವರಿ 10 ರಿಂದ 16 ದಿನ ನೀರು ಹರಿಸಿ, 15 ದಿನ ನಿಲ್ಲಿಸಿ, ಒಟ್ಟು 70 ದಿನಗಳ ಕಾಲ ನೀರು ಹರಿಸಲಾಗಿದೆ.
ಬಲದಂಡೆಗೆ ಅಂದ್ರೆ ದಾವಣಗೆರೆ - ಮಲೆಬೆನ್ನೂರು ವಿಭಾಗಕ್ಕೆ ಜನವರಿ 20ರ ಬದಲು ಜನವರಿ 15 ರಿಂದಲೇ 12 ದಿನ ನೀರು ಹರಿಸಿ, 20 ದಿನ ನಿಲ್ಲಿಸಿ ಒಟ್ಟು 53 ದಿನಗಳ ಕಾಲ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಎಂದರೆ ಎಡದಂಡೆಗೆ 70 ದಿನ ಬಲದಂಡೆಗೆ ಕೇವಲ 53 ದಿನ ನೀರು ಹರಿಸುವ ಆದೇಶ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ರೀತಿಯಲ್ಲಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ರೈತರಿಗೆ ಅನ್ಯಾಯ: ಸತೀಶ್ ಅವರು ಆಕ್ರೋಶ ವ್ಯಕ್ತಪಡಿಸಿ, "ಹೊಸ ವೇಳಾಪಟ್ಟಿಯಂತೆ ಬಲದಂಡೆಗೆ ಜನವರಿ 15 ರಿಂದ 12 ದಿನ ನೀರು ಹರಿಸುವುದು ಮತ್ತು 20 ದಿನ ನಿಲ್ಲಿಸಿದ್ರೆ, ದಾವಣಗೆರೆ ಜಿಲ್ಲೆಯ ರೈತರಿಗೆ ಬಹಳ ಅನ್ಯಾಯವಾಗುತ್ತದೆ. ಏಕೆಂದರೆ 12 ದಿನ ನೀರು ಹರಿಸಿದ್ರೆ ದಾವಣಗೆರೆ-ಮಲೆಬೆನ್ನೂರು ಭಾಗದ ಜಮೀನುಗಳಿಗೆ ನೀರು ತಲುಪುವುದಿಲ್ಲ. ಅಧಿಕಾರಿಗಳು ಹೇಳುವ ಪ್ರಕಾರ, ನಿತ್ಯ ಎಡ ಮತ್ತು ಬಲದಂಡೆಗಳಿಗೆ ನೀರು ಬಿಡಲು 0.29 ಟಿಎಂಸಿ ನೀರು ಬೇಕಾಗುತ್ತದೆ. ಈಗ ಡ್ಯಾಂನಲ್ಲಿ ಬಳಕೆಗೆ ಬಾರದ ಡೆಡ್ ಸ್ಟೋರೇಜ್ 13.83 ಟಿಎಂಸಿ ನೀರು ತೆಗೆದು ಬಳಕೆಗೆ ಬರುವ ನೀರು 21.54 ಟಿ.ಎಂ.ಸಿ ನೀರು ಇದೆ. ಇದನ್ನು ಪ್ರತಿ ದಿನ 0.29 ರಂತೆ 74 ದಿನ ಹರಿಸಬಹುದು ಎಂದರು.
ಪಂಪ್ ಸೆಟ್ ಹಾವಳಿಗೆ ಆಕ್ರೋಶ: ಈ ವೇಳೆ, ಪ್ರತಿಭಟನೆಯ ಬಳಿಕ ಪ್ರತಿಕ್ರಿಯಿಸಿದ ರೈತ ಮುಖಂಡ ನಾಗೇಶ್ವರ್ ರಾವ್ ಅವರು, "ನಾವು ಐಸಿಸಿ ಸಭೆಗೆ ಭಾಗಿಯಾಗಿದ್ರು ಕೂಡ ಅಲ್ಲಿ ನಮಗೆ ಮಾತ್ನಾಡಲು ಬಿಡಲಿಲ್ಲ. ನಾವು ಭದ್ರಾ ನೀರಿಗಾಗಿ ಗುದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸಭೆಗೆ ಭಾಗಿಯಾಗಲು ಕೂಡ ಅವಕಾಶ ಮಾಡಿಕೊಡುವುದಿಲ್ಲ. ರಾತ್ರಿನೇ ಒಪ್ಪಂದ ಮಾಡಿಕೊಂಡು ನೀರು ಬಿಡುವ ಬಗ್ಗೆ ಅವರೇ ನಿರ್ಧಾರ ಕೈಗೊಳ್ಳುತ್ತಾರೆ. ನಮಗೆ ನೀರು ಬೇಕಾಗಿದೆ. ಅಲ್ಲಿ ಸಭೆಗೆ ಭಾಗಿಯಾಗಲು ಹೋದರೆ ಪೊಲೀಸ್ ಕಾಟ ಹೆಚ್ಚು, ಪಂಪ್ ಸೆಟ್ಗಳ ಹಾವಳಿ ಹೆಚ್ಚಾಗಿದೆ. 350ಕ್ಕೂ ಹೆಚ್ಚು ಪಂಪ್ಸೆಟ್ ಗಳಿಂದ ನೀರು ಹೊಡೆದುಕೊಳ್ಳುತ್ತಿದ್ದಾರೆ. ಆದರೆ ನಮ್ ಉಸ್ತುವಾರಿ ಸಚಿವರು ಏನೂ ಕ್ರಮ ತೆಗೆದುಕೊಂಡಿಲ್ಲ. ಮೂರು ಜಿಲ್ಲಾಧಿಕಾರಿ, ಮೂರು ಜನ ಎಂಪಿಗಳು ಹದಿನೈದಕ್ಕೂ ಹೆಚ್ಚು ಶಾಸಕರು ಮೂರು ಜಿಲ್ಲೆಗಳಿಂದ ಬರಲಿದ್ದಾರೆ. ಯಾರಿಂದ ಏನೂ ಮಾಡಲು ಆಗ್ತಿಲ್ಲ ಎಂದರು".
ಇದನ್ನೂ ಓದಿ : ರೈತರ ನಿರಂತರ ಪ್ರತಿಭಟನೆಗೆ ಮಣಿದ ಸರ್ಕಾರ.. ಭದ್ರಾ ಬಲ ಎಡದಂಡೆ ನಾಲೆಗಳಿಗೆ ನೀರು ಬಿಡುಗಡೆ