ದಾವಣಗೆರೆ : ನಾಳೆ ದಾವಣಗೆರೆ ಬಂದ್ಗೆ ಕೈಜೋಡಿಸುವಂತೆ ಅಂಗಡಿ ಮಾಲೀಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ರೈತರು ಮನವಿ ಮಾಡಿದ್ದಾರೆ. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೂರು ದಿನಗಳ ಕಾಲ ನೀರು ಹರಿಸುವುದನ್ನು ಕಾಡಾ ನಿಲ್ಲಿಸಿರುವುದನ್ನು ವಿರೋಧಿಸಿ ರೈತರ ಹೋರಾಟ ತೀವ್ರವಾಗಿದೆ. ಕಳೆದ 15 ದಿನಗಳ ಹೋರಾಟಕ್ಕೆ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದ ಬೆನ್ನಲ್ಲೇ ಸೋಮವಾರ ದಾವಣಗೆರೆ ಬಂದ್ ಗೆ ರೈತರು ಕರೆ ಕೊಟ್ಟಿದ್ದಾರೆ.
ದಾವಣಗೆರೆ ಬಂದ್ ಗೆ ರಸಗೊಬ್ಬರ ಅಂಗಡಿ ಮಾಲೀಕರು, ದಲ್ಲಾಳಿ ಅಂಗಡಿಯವರು, ಆಟೋ ಬಸ್ ಮಾಲೀಕರ ಸಂಘ, ಕನ್ನಡಪರ ಹೋರಾಟಗಾರರು, ಬೀದಿಬದಿ ವ್ಯಾಪಾರಿಗಳು, ರೈಸ್ ಮಿಲ್ ಮಾಲೀಕರು ಬಂದ್ ಗೆ ಬೆಂಬಲ ನೀಡಿದ್ದಾರೆ. ಇನ್ನು ಸಾರ್ವಜನಿಕರಿಗೂ ಕರಪತ್ರ ನೀಡಿದ ರೈತರು ನಾಳೆ ಬಂದ್ ಗೆ ಬೆಂಬಲಿಸುವಂತೆ ಹೇಳಿದ್ದಾರೆ.
ಭದ್ರಾ ನೀರು ನೆಚ್ಚಿಕೊಂಡು ಸಾವಿರಾರು ರೈತರು 1.40 ಲಕ್ಷ ಎಕರೆಯಲ್ಲಿ ರೈತರು ಭತ್ತದ ನಾಟಿ ಮಾಡಿ ನೀರಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಭದ್ರಾ ಕಾಡಾ ಸಮಿತಿ ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಬಿಡುತ್ತೇವೆ ಎಂದು ಹೇಳಿದ್ದು, ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಹರಿಸಿದರೆ ಟೇಲ್ ಎಂಡ್ ರೈತರಿಗೆ ನೀರು ಸಿಗದೆ ಇರುವುದು ಚಿಂತೆಗೀಡು ಮಾಡಿದೆ. ಇದಲ್ಲದೆ ಭದ್ರಾ ನೀರಿಗಾಗಿ ಶಿವಮೊಗ್ಗ, ಭದ್ರಾವತಿ ಹಾಗು ದಾವಣಗೆರೆ ಜಿಲ್ಲೆಯ ರೈತರ ನಡುವೆ ಜಟಾಪಟಿ ಏರ್ಪಟಿದ್ದರಿಂದ ರೈತರ ಪರಿಸ್ಥಿತಿ ನಾ ಕೊಡೆ, ನೀ ಬಿಡೆ ಎಂಬಂತಾಗಿದೆ. ಕೂಡಲೇ ಭತ್ತಕ್ಕೆ ನೀರು ಹಾಯಿಸುವಂತೆ ರಾಜ್ಯ ಸರ್ಕಾರಕ್ಕೆ ರೈತರು ಒತ್ತಾಯಿಸುತ್ತಿದ್ದಾರೆ. ಇನ್ನು 1.40 ಲಕ್ಷ ಎಕರೆಯಲ್ಲಿ ಭತ್ತದ ಬೆಳೆ ಬೆಳೆಯುತ್ತಿದ್ದು, 4.20 ಲಕ್ಷ ಮೆಟ್ರಿಕ್ ಟನ್ ಭತ್ತ, 2.55 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಉತ್ಪಾದನೆಯಾಗುತ್ತದೆ. ಆದರೆ ಭದ್ರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನಿಲ್ಲಿಸಿದ ಹಿನ್ನೆಲೆ ರೈತರಿಗೆ ದಿಕ್ಕು ತೋಚದಂತಾಗಿದೆ.
ಜಲಾಶಯದಲ್ಲಿ ನೀರು ಇರುವುದೆಷ್ಟು? : ಜಲಾಶಯದ ನೀರಿನ ಲೆಕ್ಕಾಚಾರ ಮಾಡಿದರೇ ಕುಡಿಯುವ ನೀರಿಗೆ 7 ಟಿಎಂಸಿ, ಆವಿಯಾಗುವ ನೀರು 2.5 ಟಿಎಂಸಿ ತೆಗೆದು ಭತ್ತದ ಬೆಳೆಗೆ 12.44 ಟಿಎಂಸಿ ನೀರು ಬೇಕಾಗಿದೆ. ಇದನ್ನು ಡ್ಯಾಂನಲ್ಲಿ ಕುಡಿಯುವ ನೀರು ಸೇರಿ 17.05 ಉಳಿಯಲಿದೆ. ನಮ್ಮ ನೀರು ನಮಗೆ ಕೊಡಲಿ, ಕಾಡಾದವರು ನಮ್ಮನ್ನು ಕಾಡುತ್ತಲೇ ಬರುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರಿಂದ ಭಾನುವಾರದ ಸಂಜೆಯೊಳಗೆ ನೀರು ಬಿಡುವ ಆದೇಶ ಬಂದ್ರೇ ಬಂದ್ ಕೈಬಿಡುತ್ತೇವೆ. ಇಲ್ಲದೆ ಇದ್ರೆ ಬಂದ್ ಮಾಡ್ತೇವೆ. ಶಾಲಾ ಕಾಲೇಜಿಗೆ ತೊಂದರೆ ಕೊಡುವುದಿಲ್ಲ ಎಂದು ರೈತರು ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಬಂದ್ಗೆ ಸೋಮವಾರ ದಿನಾಂಕ ಘೋಷಣೆ: ವಾಟಾಳ್ ನಾಗರಾಜ್