ದಾವಣಗೆರೆ: ಕೋಡಿಹಕಳ್ಳಿ ಚಂದ್ರಶೇಖರ್ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ದಾವಣಗೆರೆಯಲ್ಲಿ ರೈತ ಸಂಘದ ಮುಖಂಡರು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರ್ ನಾಯ್ಕ, ರೇಣುಕಾಚಾರ್ಯ ನರ್ಸ್ ವಿಜಯಲಕ್ಷ್ಮಿ ಎಂಬುವರಿಗೆ ಮಾಡಬಾರದ್ದು ಮಾಡಿದವನು ಎಂದು ಆಕ್ರೋಶ ಹೊರಹಾಕಿದರು.
ಓದಿ : ಕೋಡಿಹಳ್ಳಿ ಚಂದ್ರಶೇಖರ್ ದಲ್ಲಾಳಿಗಳ ಮುಖ್ಯಸ್ಥ: ರೇಣುಕಾಚಾರ್ಯ
ರೇಣುಕಾಚಾರ್ಯ ಕಂಡವರ ಮನೆಯ ಹೆಣ್ಣು ಮಕ್ಕಳ ಮೇಲೆ ಕೈ ಹಾಕುವ ಕುಲಕ್ಕೆ ಸೇರಿದವ. ಇಂತಹ ನೀಚ ಕೆಲಸ ಮಾಡುವ ರೇಣುಕಾಚಾರ್ಯ ಡೋಂಗಿ ರಾಜಕಾರಣಿ ಆಗಿರಬಹುದು. ಮೊಣಕಾಲಷ್ಟು ನೀರು ಇರುವ ಪ್ರದೇಶದಲ್ಲಿ ತೆಪ್ಪದ ಮೇಲೆ ಡೋಂಗಿ ನಾಟಕ ಮಾಡಿದ್ದು ಇಡೀ ರಾಜ್ಯದ ಜನತೆಗೆ ನೋಡಿದೆ ಎಂದು ಹರಿಹಾಯ್ದರು.
ಕೋಡಿಹಳ್ಳಿ ಚಂದ್ರಶೇಖರ್ ಅಕ್ರಮ ಆಸ್ತಿ ಗಳಿಸಿಲ್ಲ. ರೇಣುಕಾಚಾರ್ಯ ಹೀಗಂತ ವಿನಾ ಕಾರಣ ಆರೋಪ ಮಾಡಿದ್ದಾರೆ. ಹಾಗೆಯೇ ಆಗಿದ್ದಲ್ಲಿ ತಮ್ಮದೇ ಸರ್ಕಾರ ಇರುವುದರಿಂದ ಈ ಬಗ್ಗೆ ತನಿಖೆ ನಡೆಸಲಿ. ಬಿಜೆಪಿ ಸರ್ಕಾರಕ್ಕೇನಾದರೂ ಲಕ್ವಾ ಹೊಡೆದಿದೆಯಾ? ಇಲ್ಲವೇ ಅವರ ವಿರುದ್ಧ ತನಿಖೆ ನಡೆಸಲು ತಾಕತ್ ಇಲ್ವಾ? ಅಂತಹ ಅಕ್ರಮ ಆಸ್ತಿ ಇದ್ದರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಅವರು ಸವಾಲು ಹಾಕಿದರು.