ದಾವಣಗೆರೆ: ಯುವ ವಿಜ್ಞಾನಿ ಎಂದು ಪ್ರಚಾರ ಪಡೆದಿರುವ ಡ್ರೋನ್ ಪ್ರತಾಪ್ ಜುಲೈ 1ರಿಂದ 8ರವರೆಗೆ ನಗರದ ರೆಸಿಡೆನ್ಸಿಯೊಂದರಲ್ಲಿ ತಂಗಿದ್ದ ಮಾಹಿತಿ ತಡವಾಗಿ ಬೆಳಕಿಗೆ ಬಂದಿದ್ದು, ಪ್ರತಾಪ್ ಮಾಹಿತಿಯೊಂದನ್ನು ಹಂಚಿಕೊಡಿದ್ದ ಎಂದು ಹೋಟೆಲ್ ಮಾಲೀಕ ಬಹಿರಂಗಪಡಿಸಿದ್ದಾರೆ.
ನಗರದ ಪಿ.ಬಿ.ರಸ್ತೆಯಲ್ಲಿರುವ (ಅರುಣ್ ಸರ್ಕಲ್) ಶ್ರೀಗಂಧ ರೆಸಿಡೆನ್ಸಿಯಲ್ಲಿ ಉಳಿದುಕೊಂಡಿದ್ದ ಪ್ರತಾಪ್, ಇನ್ನು ಒಂದು ವಾರದಲ್ಲಿ ನನ್ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಬರುತ್ತವೆ ಎಂದು ಹೋಟೆಲ್ ಮಾಲೀಕ ವಿನಾಯಕ್ ಅವರಿಗೆ ಹೇಳಿ ಅಲ್ಲಿಂದ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ.
ವೈಯಕ್ತಿಕ ಕೆಲಸದ ನಿಮಿತ್ತ ದಾವಣಗೆರೆಗೆ ಬಂದಿದ್ದೇನೆ. ದೆಹಲಿಗೆ ಹೋಗಬೇಕಿದೆ. ಹೋಟೆಲ್ ಸಿಬ್ಬಂದಿಗೆ ಪ್ರಧಾನಿ ಮೋದಿ ಫೋನ್ ಮಾಡಿದ್ದಾರೆ. ಒಂದು ಆಫರ್ ಕೊಟ್ಟಿದ್ದರು. ನಾನು ನಿರಾಕರಿಸಿದೆ ಎಂದು ಪ್ರತಾಪ್ ಹೇಳಿದ್ದ. ಅದಕ್ಕೆ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಬರುತ್ತವೆ ಎಂದು ತನ್ನ ಬಳಿ ಹೇಳಿಕೊಂಡಿದ್ದ ಎಂದು ಮಾಲೀಕ ವಿನಾಯಕ್ ಮಾಹಿತಿ ನೀಡಿದ್ದಾರೆ.
ಜುಲೈ 8ರಂದು ತಾನೇ ವಿಡಿಯೋ ಮಾಡಿ ಹೋಟೆಲ್ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿ ಬಳಿಕ ಬೆಂಗಳೂರಿಗೆ ಪ್ರತಾಪ್ ಹೋಗಿದ್ದ ಎಂದು ವಿನಾಯಕ್ ಹೇಳಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.