ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರ ಮನವೊಲಿಸುವಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹಾಗೂ ಎಸ್‌ಪಿ ಹನುಮಂತರಾಯ ಯಶಸ್ವಿಯಾದರು.
ಕಲ್ಪನಹಳ್ಳಿ, ಮಲ್ಲಶೆಟ್ಟಿಹಳ್ಳಿ, ಹೊನ್ನೂರು ಮತ್ತು ಲಕ್ಕಮುತ್ತೇನಹಳ್ಳಿಯಲ್ಲಿ ಹೊಸದಾಗಿ ಅಂಡರ್ ಪಾಸ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು, ಕಂದಾಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದರು.
ಉತ್ತಮ ದರ್ಜೆಯ ಮತ್ತು ವಿಶಾಲವಾದ ಅಂಡರ್ ಪಾಸ್ ನಿರ್ಮಿಸಬೇಕು ಎನ್ನುವುದು ಜನರ ಬೇಡಿಕೆಯಾಗಿತ್ತು. ಈ ಬೇಡಿಕೆ ಈಡೇರಿಸದಿದ್ದರೆ ಕಾಮಗಾರಿ ನಡೆಸುವುದಕ್ಕೆ ಅಡ್ಡಿಪಡಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದರು.
ಈ ಬೆನ್ನಲ್ಲೇ ಡಿಸಿ ಮತ್ತು ಎಸ್‍ಪಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳಂತೆ ಈ ಹಂತದಲ್ಲಿ ಗ್ರಾಮಸ್ಥರ ಬೇಡಿಕೆಗೆ ತಕ್ಕಂತೆ ವಿಶಾಲವಾದ ಅಂಡರ್ ಪಾಸ್ ನಿರ್ಮಿಸಲು ಅವಕಾಶವಿಲ್ಲವೆಂಬ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದರು. ಇದೇ ವೇಳೆ, ಕಲ್ಪನಹಳ್ಳಿ, ಮಲ್ಲಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಕಾಮಗಾರಿಯನ್ನು ಕೂಡಲೇ ಮುಕ್ತಾಯಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.