ದಾವಣಗೆರೆ : ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಸಾಮಾನ್ಯ. ಆದರೆ, ಪರೀಕ್ಷೆಗಳಿಗೆ ತಯಾರಿ ನಡೆಸಲು ಬೇಕಾದ ಪುಸ್ತಕಗಳು , ಗ್ರಂಥಾಲಯಗಳ ಲಭ್ಯತೆ ಮಾತ್ರ ಮರೀಚಿಕೆಯಾಗಿರುತ್ತದೆ. ಆದರೆ, ಇಲ್ಲೊಂದು ಗ್ರಾಮ ಪಂಚಾಯಿತಿ ಸುಸಜ್ಜಿತವಾದ ಗ್ರಂಥಾಲಯ ತೆರೆದು ಪರೀಕ್ಷಾರ್ಥಿಗಳಿಗೆ ಬೇಕಾಗುವ ಪುಸ್ತಕಗಳನ್ನು ಒದಗಿಸುತ್ತಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಭ್ರಷ್ಟಾಚಾರದ ಕೂಪವಾಗದೇ ವಿದ್ಯಾ ಕೇಂದ್ರವಾಗಿ, ಬಡ ವಿದ್ಯಾರ್ಥಿಗಳ ದಾರಿದೀಪವಾಗಿದೆ.
ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಶ್ರಮದಿಂದ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಈ ಗ್ರಂಥಾಲಯದಲ್ಲಿ ವಿವಿಧ ಸಾಹಿತಿಗಳ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಪುಸ್ತಕಗಳನ್ನು ಸಂಗ್ರಹ ಮಾಡಲಾಗಿದ್ದು, ಸೊಕ್ಕೆ ಗ್ರಾಮ ಒಂದೇ ಅಲ್ಲದೇ ಸುತ್ತಮುತ್ತಲಿನ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.
ಈ ಗ್ರಂಥಾಲಯದಲ್ಲಿ ಐಎಎಸ್ , ಕೆಎಎಸ್ ಅಭ್ಯರ್ಥಿ ಗಳಿಗೆ ಓದಲು ಬೇಕಾದ ನೂರಾರು ಪುಸ್ತಕಗಳನ್ನು ಸಂಗ್ರಹಿಸಿಡಲಾಗಿದೆ. ಈ ಗ್ರಂಥಾಲಯದಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲ ಸೌಲಭ್ಯಗಳಿದ್ದು, ಇ ಲೈಬ್ರರಿ ಮೂಲಕ ಪುಸ್ತಕಗಳನ್ನು ಪಡೆದುಕೊಳ್ಳಬಹುದು.
ಇಲ್ಲಿರುವ ಮೂರು ಕಂಪ್ಯೂಟರ್ ಗಳಲ್ಲಿ ಇ ಲೈಬ್ರರಿ ಕೂಡ ಅಳವಡಿಕೆ ಮಾಡಲಾಗಿದ್ದು, ಲಕ್ಷಾಂತರ ಪುಸ್ತಕಗಳು ಇಲ್ಲಿ ಲಭ್ಯವಿದೆ. ಪಿಡಿಒ, ಬ್ಯಾಂಕ್, ಕಾನ್ಸ್ಟೇಬಲ್, ಐಪಿಎಸ್, ಐಎಎಸ್ ,ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷಗಳಿಗ ಪುಸ್ತಕಗಳು ಸಿಗುವಂತೆ ಮಾಡಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಯಾವುದಾದರೂ ಸ್ಪರ್ಧಾತ್ಮಕ ಪುಸ್ತಕಗಳು ಬೇಕು ಎಂದರೆ ತರಿಸಿಕೊಡುವ ಕೆಲಸವನ್ನು ಪಂಚಾಯಿತಿ ಅಧಿಕಾರಿಗಳು ಮಾಡುತ್ತಿದ್ದಾರೆ.
ಈ ರೀತಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುದಾನವನ್ನು ಬಳಸಿ ಒಂದು ಗ್ರಂಥಾಲಯ ನಿರ್ಮಾಣ ಮಾಡಿದರೆ ಬಡ ವಿದ್ಯಾರ್ಥಿಗಳ ಕಲಿಕೆಗೂ ಕೂಡ ಅನುಕೂಲವಾಗುತ್ತದೆ.
ಓದಿ : ಸಿದ್ದರಾಮಯ್ಯ ಭೇಟಿ ಮಾಡಿದ ವೀರೇಶ ಸೊಬರದಮಠ ನೇತೃತ್ವದ ರೈತರ ನಿಯೋಗ