ದಾವಣಗೆರೆ: ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಅವರು ಶುಕ್ರವಾರ ಎಸ್ಪಿ ಕಚೇರಿಯಲ್ಲಿ ನಡೆದ ಪೊಲೀಸ್ ಇಲಾಖೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಅವರು, ಪೊಲೀಸ್ ಠಾಣೆ ನಿರ್ವಹಣಾ ವೆಚ್ಚ ಹೆಚ್ಚು ಮಾಡಿದ್ದು, ಪೊಲೀಸರ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚೆ ಮಾಡಿದ್ದು, ಮಾರಿಷಸ್ ದೇಶದ ಪೊಲೀಸ್ ವ್ಯವಸ್ಥೆಗೆ ಹೋಲಿಸಿದರೆ ನಮ್ಮ ದೇಶದ ಪೊಲೀಸ್ ವ್ಯವಸ್ಥೆ ವಿಭಿನ್ನವಾಗಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸಲು ಟೆಕ್ನಾಲಜಿ ಬಳಸಬೇಕು. ಟೆಕ್ನಾಲಜಿ ಬಳಸುವುದರಿಂದ ಜನಸಾಮಾನ್ಯರ ಸಹಕಾರ ಬೇಗ ಸಿಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಎಫ್ಎಸ್ಎಲ್ ಆರಂಭ ಮಾಡುತ್ತಿದ್ದೇವೆ. ಜೊತೆಗೆ ಅಕ್ರಮ ಮರಳುಗಾರಿಕೆ ಹಾಗೂ ಡ್ರಗ್ಸ್ ದಂಧೆಗೆ ನಮ್ಮ ಪೊಲೀಸರು ಕಡಿವಾಣ ಹಾಕಲು ಸಿದ್ಧರಿದ್ದಾರೆ ಎಂದು ತಿಳಿಸಿದರು.