ದಾವಣಗೆರೆ: ಸುಮಾರು 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ, ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಹರಿಹರದ ಜೆ.ಸಿ.ಬಡಾವಣೆಯಲ್ಲಿರುವ ಐತಿಹಾಸಿಕ ಧರ್ಮರತ್ನಕರ್ ರಾಜನಹಳ್ಳಿ ಮದ್ದೂರಾಯಪ್ಪ (ಧಾ.ರ.ಮ) ಪ್ರೌಢಶಾಲೆ ಶಿಥಿಲಾವಸ್ಥೆಯಲ್ಲಿದ್ದು, ವಿದ್ಯಾರ್ಥಿಗಳು ಆತಂಕದಲ್ಲಿ ಪಾಠ ಕೇಳುವ ಪರಿಸ್ಥಿತಿ ಇದೆ. ಹೀಗಾಗಿ ಶಾಲೆಯನ್ನು ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಬೇಕೆಂದು ಶಾಲಾ ಆಡಳಿತ ಮಂಡಳಿ ಸರ್ಕಾರವನ್ನು ಒತ್ತಾಯಿಸಿದೆ.
ಮೊದಲಿಗೆ ಹರಿಹರದ ಹರಪನಹಳ್ಳಿ ರಸ್ತೆ ಬಳಿಯ ಅಂದಿನ ಪುರಸಭೆಯ ಪುಟ್ಟ ಕಟ್ಟಡದಲ್ಲಿ ಆರಂಭವಾದ ಈ ಶಾಲೆಯ ನಿರ್ಮಾಣಕ್ಕೆ 1945ರಲ್ಲಿ ಮಧ್ಯ ಕರ್ನಾಟಕದ ಮಹಾದಾನಿ ಎಂದೇ ಖ್ಯಾತಿ ಗಳಿಸಿದ್ದ ರಾಜನಹಳ್ಳಿ ಮದ್ದೂರಾಯಪ್ಪ ಅವರ ಕುಟುಂಬದವರು ಜಮೀನು ದಾನ ನೀಡಿದ್ದರು. 1947ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ರಾಮಸ್ವಾಮಿ ಮೊದಲಿಯಾರ್ ಈ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. 1955ರಲ್ಲಿ ಆಗಿನ ಶಿಕ್ಷಣ ಸಚಿವ ಎ.ಜಿ.ರಾಮಚಂದ್ರರಾವ್ ಉದ್ಘಾಟನೆ ಮಾಡಿದ್ದರು.
ಬಳಿಕ ಹಂತಹಂತವಾಗಿ ಇದೇ ಶಾಲೆಯ ಕಟ್ಟಡದಲ್ಲಿ 1971ರಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭಿಸಲಾಗಿತ್ತು. ವಿಶೇಷವೆಂದರೆ ವಿದ್ಯಾಮಂದಿರದಲ್ಲಿ ಅಂದು ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಇಲ್ಲಿ ವಿದ್ಯಾರ್ಜನೆ ಮಾಡಿದವರು ಪ್ರಾಂಶುಪಾಲ, ಇಂಜಿನಿಯರ್, ವೈದ್ಯ, ಜಿಲ್ಲಾಧಿಕಾರಿ, ಸಾಹಿತಿ, ವಿಜ್ಞಾನಿ ಮತ್ತು ರಾಜಕೀಯ ಮುತ್ಸದ್ದಿಗಳಾಗಿದ್ದಾರೆ. ಸಚಿವ ವೈ.ನಾಗಪ್ಪ ಅವರೂ ಕೂಡಾ ಇಲ್ಲಿಯೇ ವ್ಯಾಸಂಗ ಮಾಡಿದ್ದರು.
ಇಂತಹ ಐತಿಹಾಸಿಕ ಹಿನ್ನೆಲೆ ಇರುವ ಶಾಲೆ ಇದೀಗ ಬಿರುಕು ಬಿಟ್ಟು ಬೀಳುವ ಹಂತ ತಲುಪಿದೆ. 380 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ನಾಲ್ಕು ಕೊಠಡಿಗಳನ್ನು ನೆಲಸಮ ಮಾಡಲಾಗಿದೆ. ಇನ್ನೂ 13 ಕೊಠಡಿಗಳು ನೆಲಸಮ ಮಾಡಬೇಕಾಗಿದೆ. ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಇರುವುದರಿಂದ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು ಎಂದು ಉಪ ಪ್ರಾಂಶುಪಾಲ ಸಿದ್ದರಾಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಶಾಲೆ ಪಕ್ಕದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಕ್ಕೆ ಆಗ್ರಹ