ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕ್ ಅಪ್ ಡ್ಯಾಂ ಗೇಟ್ಗಳು ರೈತರ ಬೆಳೆಗಳಿಗೆ ಕುತ್ತು ತಂದಿಟ್ಟಿವೆ. ಡ್ಯಾಂನ ಗೇಟ್ಗಳಿಗೆ ಸಸ್ಯರಾಶಿ ಅಡ್ಡ ಕೂತಿರುವ ಹಿನ್ನೆಲೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಪರಿಣಾಮ ಡ್ಯಾಂ ಹಿನ್ನೀರಿನಿಂದ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ. ಈ ಸಮಸ್ಯೆ ಸಾಕಷ್ಟು ದಿನಗಳಿಂದ ತಲೆದೋರಿದ್ದರೂ, ಸಣ್ಣ ನೀರವಾರಿ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಕಣ್ಣು ಹಾಯಿಸಿಲ್ಲ.
ಡ್ಯಾಂನ ಗೇಟ್ಗಳಿಗೆ ಅಡ್ಡಲಾಗಿ ಅನಾವಶ್ಯಕವಾಗಿ ಹಾಕಿರುವ ಸರಳುಗಳನ್ನು ತೆರುವು ಮಾಡುವಂತೆ ಆಗ್ರಹಿಸಿ, ರೈತರು ಹೋರಾಟ ಆರಂಭಿಸಿದ್ದಾರೆ. ಡ್ಯಾಂನ ಗೇಟ್ನಲ್ಲಿ ಅಪಾರ ಪ್ರಮಾಣದ ಸಸ್ಯಗಳು ಇರುವುದರಿಂದ ನೀರು ಹೋಗಲು ತೊಂದರೆಯಾಗುತ್ತಿದೆ. ಪರಿಣಾಮ ಬಲ್ಲೂರು, ರೆಡ್ಡಿಹಳ್ಳಿ, ಸಂಕ್ಲಿಪುರ ಸೇರಿದಂತೆ ಏಳು ಗ್ರಾಮಗಳ ವ್ಯಾಪ್ತಿಯ ಜಮೀನಿನಲ್ಲಿ ನೀರು ಸಂಗ್ರಹವಾಗಿದೆ. ಭತ್ತ ಸೇರಿದಂತೆ ಹಲವಾರು ಬೆಳೆಗಳು ಜಲ ಸಮಾಧಿಯಾಗಿವೆ. ತಕ್ಷಣಕ್ಕೆ ಡ್ಯಾಂನ ಗೇಟ್ ಓಪನ್ ಮಾಡಿ ನೀರು ಹರಿದುಹೋಗಲು ಅನುಕೂಲ ಮಾಡುವಂತೆ ರೈತರ ಆಗ್ರಹಿಸಿದ್ದಾರೆ.
ಕೆರೆ ಹಿನ್ನೀರಿನಿಂದ ಅಡಕೆ ತೋಟಗಳು ಮುಳುಗಡೆಯಾಗಿದ್ದು, ರೈತರು ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಡು ನೀರಿನಲ್ಲಿ ನಿಂತು ರೈತರು ಅಡಿಕೆ ಕಟಾವು ಮಾಡುತ್ತಿದ್ದಾರೆ. ನೀರು ತೆರವು ಗೊಳಿಸಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸದ ಜಿ ಎಂ ಸಿದ್ದೇಶ್ವರ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಅಡಿಕೆ ತೋಟ ಜಲಾವೃತ.. ರೈತನಿಗೆ ಸಂಕಷ್ಟ