ದಾವಣಗೆರೆ: ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಅಶ್ವತಿ ವಿರುದ್ಧ ಮಾದರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.
ಸಿದ್ಧ ಶೌಚಾಲಯಗಳ ನಿರ್ಮಾಣ ಮಾಡಿರುವ ಹನ್ನೆರಡು ಲಕ್ಷ ರೂಪಾಯಿ ಬಿಡುಗಡೆ ಮಾಡಲು ವಿಳಂಬ ನೀತಿ ಅನುಸರಿಸಿದ್ದಾರೆ. ಕೇವಲ ಪ್ರಚಾರಕ್ಕಷ್ಟೇ ನಮ್ಮ ಸಂಸ್ಥೆ ಸಹಾಯ ಪಡೆದಿದ್ದಾರೆ. ಹಣ ಬಿಡುಗಡೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಶ್ವತಿ ಕ್ರಮ ಕೈಗೊಳ್ಳಲಿಲ್ಲ ಎಂದು ಸಂಸ್ಥೆ ಆರೋಪಿಸಿದೆ.
ಸಂಸ್ಥೆಯಿಂದ ಸಿದ್ಧಪಡಿಸಿದ ಶೌಚಾಲಯಗಳ ಪೈಕಿ 66 ಸಿದ್ಧ ಶೌಚಾಲಯಗಳ ಪ್ರೋತ್ಸಾಹ ಧನ ಪಾವತಿಸಿಲ್ಲ. ವರ್ಗಾವಣೆಗೆ ಮುನ್ನ ಸಿಇಒ ಅಶ್ವತಿಗೆ ಮನವಿ ಸಲ್ಲಿಸಿದಾಗ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಕೇವಲ ಪ್ರಚಾರಕ್ಕಾಗಿ, ಪ್ರಶಸ್ತಿ ಪಡೆಯುವ ಸಲುವಾಗಿ ನಮ್ಮ ಸಂಸ್ಥೆಯನ್ನು ಅಶ್ವತಿ ಬಳಸಿಕೊಂಡಿದ್ದಾರೆ ಎಂದು ಸಂಸ್ಥೆಯ ಸದಸ್ಯ ಶ್ರೀನಿವಾಸ್ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.
ಜಿಲ್ಲೆಯ ಮಾಯಕೊಂಡ, ದಿದ್ದಿಗಿ, ಅಣಬೂರು, ಗಂಗನಕೋಟೆ, ಚಿನ್ನಿಕಟ್ಟೆ, ಹನುಮಸಾಗರ ಸೇರಿದಂತೆ ಹಲವು ಗ್ರಾಮ ಪಂಚಾಯತ್ಗಳಲ್ಲಿ ಫಲಾನುಭವಿಗಳಿಗೆ ಸಿದ್ಧ ಶೌಚಾಲಯ ನಿರ್ಮಿಸಿಕೊಡಲಾಗಿತ್ತು. ಇದರಿಂದ ಅಶ್ವತಿ ಅವರಿಗೂ ಒಳ್ಳೆಯ ಹೆಸರು ಬಂದಿತ್ತು. ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂಬ ಅವಾರ್ಡ್ ಸಹ ಪಡೆದಿದ್ದರು. ಬಳಿಕ ನಿರ್ಮಾಣ ಮಾಡಿದ್ದ ಶೌಚಾಲಯಗಳ ಪ್ರೋತ್ಸಾಹ ಧನ ಪಾವತಿಸಲು ತೀವ್ರ ನಿರ್ಲಕ್ಷ್ಯ ವಹಿಸಿದರು ಎಂದು ಶ್ರೀನಿವಾಸ್ ದೂರಿದರು.
ಹಾರೆ-ಗುದ್ದಲಿ ಹಿಡಿದು ಪ್ರೋತ್ಸಾಹ ನೀಡಿದ್ದರು:
ಹಾರೆ, ಗುದ್ದಲಿ ಹಿಡಿದು ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ್ದ ಅಶ್ವತಿ ಅವರಿಗೆ ಐದಾರು ಬಾರಿ ಮನವಿ ಸಲ್ಲಿಸಿದ್ದರೂ ಕ್ಯಾರೇ ಎಂದಿಲ್ಲ. ಇನ್ನು ಅವರ ವರ್ಗಾವಣೆಯಾಗಿದೆ. ಇನ್ನು ದಾವಣಗೆರೆ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜೇಂದ್ರ ಅವರನ್ನು ಕೇಳಿಕೊಳ್ಳುತ್ತೇವೆ. ಮಾರ್ಚ್ 10ರೊಳಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡದಿದ್ದರೆ ಸಿದ್ಧ ಶೌಚಾಲಯಗಳನ್ನು ಕಿತ್ತುಕೊಂಡು ಬರುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.