ದಾವಣಗೆರೆ : 18 ವರ್ಷ ಪೂರೈಸಿರುವ ಯುವ ಹಾಗೂ ಭವಿಷ್ಯದ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜ.6, 7 ಮತ್ತು 8 ರಂದು ಹಮ್ಮಿಕೊಳ್ಳಲಾಗಿರುವ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2020 ಜ. 01ಕ್ಕೆ 18 ವರ್ಷಗಳನ್ನು ಪೂರೈಸುವ ಯುವ ಮತದಾರರು ನಮೂನೆ-6 ನ್ನು ಅಂತರ್ಜಾಲದಲ್ಲಿ ಅಥವಾ ನೇರವಾಗಿ ಭರ್ತಿ ಮಾಡಿ ಪೂರಕ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ಮತಗಟ್ಟೆ ಅಧಿಕಾರಿಗಳಿಗೆ ನೀಡುವ ಮೂಲಕ ನೊಂದಾಯಿಸಿಕೊಳ್ಳಲು ಎಲ್ಲಾ ಕಾಲೇಜು, ವಿಶ್ವವಿದ್ಯಾನಿಲಯದ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದರು.
ಜಿ.ಪಂ ಸಿಇಓ ಅಧ್ಯಕ್ಷತೆಯ ಸ್ವೀಪ್ ಸಮಿತಿ, ಪಾಲಿಕೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಎಲ್ಲಾ ಪ್ರೌಢಶಾಲೆಗಳು ಹಾಗೂ ಕಾಲೇಜುಗಳ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಜ.06 ರಂದು ನಗರದ ಮುಖ್ಯ ಭಾಗದಲ್ಲಿ ಪ್ರಭಾತ್ ಪೇರಿಯನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಡೆಸಬೇಕು ಎಂದರು.
ಸಭೆಯಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ ಜಿ ಮಾತನಾಡಿ, ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು. ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಚುನಾವಣಾ ತಹಶೀಲ್ದಾರ್ ಪ್ರಸಾದ್, ಜಿ.ಪಂ. ನ ಪಿಎಇಓ ಶಾರದ, ತಾಲೂಕುಗಳ ತಹಶೀಲ್ದಾರರು, ನಗರದ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಬಿಎಲ್‍ಓಗಳು, ಇತರೆ ಸಿಬ್ಬಂದಿಗಳು ಹಾಜರಿದ್ದರು.