ದಾವಣಗೆರೆ: ಇಬ್ಬರು ಪ್ರೇಮಿಗಳು ಪ್ರೀತಿಸಿ ಮದುವೆಯಾಗಿರುವ ಹಿನ್ನೆಲೆ ಹುಡುಗನ ಪೋಷಕರ ಮೇಲೆ ಯುವತಿಯ ಪೋಷಕರು ಮತ್ತು ಸಂಬಂಧಿಕರು ಅಮಾನುಷವಾಗಿ ಹಲ್ಲೆ ಮಾಡಿರುವ ಪ್ರಕರಣ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುಗನ ಪೋಷಕರ ಮೇಲೆ ಹಲ್ಲೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹರಿಹರ ತಾಲೂಕಿನ ಗ್ರಾಮವೊಂದರ ಯುವಕ-ಯುವತಿ ಪರಸ್ಪರ ಪ್ರೀತಿಸಿ 20 ದಿನಗಳ ಹಿಂದೆ ದೇವಾಲಯದಲ್ಲಿ ಮದುವೆಯಾಗಿದ್ದರು. ನಂತರ ಉಪನೋಂದಣಿ ಕಚೇರಿಯಲ್ಲಿ ವಿವಾಹದ ನೋಂದಣಿ ಮಾಡಿಸಿದ್ದರು. ಡಿ 11ರ ಸಂಜೆ ಹುಡುಗನ ಮನೆಗೆ ಬಂದ ಯುವತಿಯ ಪೋಷಕರು, ನಿಮ್ಮ ಮಗ ನಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾನೆ, ಆತ ಎಲ್ಲಿದ್ದಾನೆ? ಅವರನ್ನು ಕರೆದುಕೊಂಡು ಬಾ ಎಂದು ಹುಡುಗನ ತಂದೆಗೆ ಗದರಿಸಿದ್ದಾರೆ. ಆಗ ಅವರು ತಮಗೆ ಗೊತ್ತಿಲ್ಲ ಅಂದಿದ್ದಕ್ಕೆ ಏಕಾಏಕಿ ಹುಡುಗಿ ಪೋಷಕರು ಮನೆಯ ಮುಂದೆಯೇ ಯುವಕನ ತಂದೆಯ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಮಧ್ಯೆ ಪ್ರವೇಶ ಮಾಡಿದ ಸ್ಥಳೀಯರ ಮೇಲೆಯೂ ಹಲ್ಲೆ ನಡೆದಿದೆ ಎನ್ನಲಾಗಿದೆ.
ಪ್ರೇಮಿಗಳಿಬ್ಬರು ಬೇರೆ ಸಮುದಾಯದವರಿದ್ದರೂ, ನಮ್ಮ ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ಹುಡುಗನ ಪೋಷಕರು ಕಾರಣ ಎಂದು ಮನಬಂದಂತೆ ಯುವಕನ ಪೋಷಕರ ಮೇಲೆ ಹಲ್ಲೆ ಮಾಡಿರುವ ಕುರಿತು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿ ಕಡೆಯವರು ಯುವಕನ ತಂದೆಯ ಮೈ ಮೇಲಿದ್ದ ಬಟ್ಟೆ ಬಿಚ್ಚಿ ಹೊಡೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಯುವಕನ ಪೋಷಕರನ್ನು ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಬೆನ್ನೂರು ಠಾಣೆಯಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಬೆನ್ನೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನುಳಿದವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂಓದಿ:ಗರ್ಲ್ ಫ್ರೆಂಡ್ ಹಿಂದೆ ಬಿದ್ದವನಿಗೆ ಚಾಕು ಇರಿತ; ಬೆಂಗಳೂರಲ್ಲಿ ಇಬ್ಬರು ಆರೋಪಿಗಳ ಬಂಧನ