ದಾವಣಗೆರೆ : ನಾಳೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಯಲ್ಲಿದೆ. ಕೈ-ಕಮಲ ಪಕ್ಷಗಳ ನಾಯಕರ ನಡುವೆ ಜಿದ್ದಾ ಜಿದ್ದಿಗೆ ಕಾರಣವಾಗಿದೆ.
ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುತ್ತಿದೆ. ಎರಡು ಪಕ್ಷಗಳಿಂದ 2 ಶಾಸಕರು, 1 ಸಂಸದ, 11 ಎಂಎಲ್ಸಿಗಳು, 44 ವಾರ್ಡ್ ಸದಸ್ಯರು ಸೇರಿ ಮೇಯರ್ ಆಯ್ಕೆಯ ಮತದಾರ ಪಟ್ಟಿಯಲ್ಲಿ 58 ಸದಸ್ಯರು ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ.
ಓರ್ವ ಶಾಸಕ, ಓರ್ವ ಸಂಸದ, 7 ಎಂಎಲ್ಸಿಗಳು, 17 ಬಿಜೆಪಿ, ನಾಲ್ವರು ಪಕ್ಷೇತರ ಸದಸ್ಯರು ಸೇರಿ ಬಿಜೆಪಿಯ ಬಲ 30 ಸ್ಥಾನಗಳಿವೆ. ಕಾಂಗ್ರೆಸ್ ಪಕ್ಷದಲ್ಲಿ 21 ಸದಸ್ಯರು, ನಾಲ್ವರು ಎಂಎಲ್ಸಿಗಳು, ಓರ್ವ ಶಾಸಕ, ಓರ್ವ ಜೆಡಿಎಸ್, ಓರ್ವ ಪಕ್ಷೇತರ ಸದಸ್ಯ ಸೇರಿ 28ರಷ್ಟು ಸಂಖ್ಯಾ ಬಲವಿದೆ. ಸಚಿವ ಆರ್ ಶಂಕರ್ ಕೂಡ ಮತದಾನ ಮಾಡುವ ಅರ್ಹತೆ ಪಡೆದುಕೊಂಡಿದ್ದಾರೆ.
ಮೇಯರ್ ಆಯ್ಕೆಯಲ್ಲಿ ಪಕ್ಷೇತರ ಸದಸ್ಯರೇ ನಿರ್ಣಾಯಕರಾಗಿದ್ದಾರೆ. ಈಗಾಗಲೇ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿಗೆ, ಬೆಂಬಲಿತ ಓರ್ವ ಪಕ್ಷೇತರ ಸದಸ್ಯ ಮತದಾನಕ್ಕೆ ಗೈರಾದರೆ ಸಮಬಲದ ಹೋರಾಟ ಮಾಡ ಬೇಕಾಗುತ್ತದೆ. ಈಗಾಗಲೇ ಎರಡೂ ಪಕ್ಷಗಳಿಂದ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ. ಮೇಯರ್ ಅಭ್ಯರ್ಥಿ ಆಯ್ಕೆಯೇ ಎರಡು ಪಕ್ಷಗಳಿಗೆ ಕಗ್ಗಂಟಾಗಿದೆ.