ದಾವಣಗೆರೆ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಯುದ್ಧ ಪ್ರಾರಂಭವಾಗಿದ್ದು, ಸಾಕಷ್ಟು ಭಾರತೀಯರು ಕೂಡ ಇಸ್ರೇಲ್ನಲ್ಲಿ ಸಿಲುಕಿದ್ದಾರೆ. ದಾವಣಗೆರೆ ಮೂಲದ ಕೆ.ಹೆಚ್.ಬಿ ಕಾಲೋನಿಯ ನಿವಾಸಿ ಹೀಲ್ಡಾ ಮೋಂಥೇರೋ ಎಂಬ ಮಹಿಳೆ ಇಸ್ರೇಲ್ನ ತಿಬೇರಿ ಎನ್ನುವ ಸ್ಥಳದಲ್ಲಿ ವಾಸವಾಗಿದ್ದಾರೆ. ಹೀಗಾಗಿ, ಮೊದಲು ಕುಟುಂಬಸ್ಥರನ್ನು ಆತಂಕ ಕಾಡಿತ್ತು. ಆದರೆ ಮಹಿಳೆ ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹೀಲ್ಡಾ ಮೋಂಥೇರೋ ಹಲವು ವರ್ಷಗಳಿಂದ ತಿಬೇರಿಯಲ್ಲಿ ಹೋಮ್ ಟೇಕರ್ ಕಾರ್ಯನಿರ್ವಹಿಸುತ್ತಿದ್ದಾರೆ. ಯುದ್ಧ ಸನ್ನಿವೇಶದಿಂದ ಆತಂಕಗೊಂಡಿರುವ ಇವರ ಪತಿ, ನಿವೃತ್ತ ಮುಖ್ಯ ಶಿಕ್ಷಕ ಅಮ್ರೋಸ್ ಅವರಿಗೆ ಪ್ರತಿದಿನ ಕರೆ ಮಾಡುತ್ತಾರೆ. ''ಯಾವುದೇ ತೊಂದರೆ ಇಲ್ಲ. ಸುರಕ್ಷಿತವಾಗಿದ್ದೇವೆ. ಯುದ್ಧ ನಡೆಯುತ್ತಿರುವ ಸ್ಥಳದಿಂದ ನೂರು ಕಿಲೋಮೀಟರ್ ದೂರದಲ್ಲಿದ್ದೇವೆ. ಶೆಲ್, ಬಾಂಬ್ ದಾಳಿ, ಯುದ್ದ ವಿಮಾನಗಳ ಶಬ್ದ ಕೇಳಿಸುತ್ತಿದೆ. ಯುದ್ದ ಪ್ರಾರಂಭವಾದಾಗ ಮುಂಜಾಗ್ರತಾ ಕ್ರಮವಾಗಿ ಬಂಕರ್‌ಗಳಿಗೆ ಹೋಗಲು ಹೇಳುತ್ತಾರೆ ಎಂದು ತಿಳಿಸಿದ್ದಾರೆ'' ಎನ್ನುತ್ತಾರೆ ಅಮ್ರೋಸ್.
''ಹೀಲ್ಡಾ ಮೊದಲು ದೈಹಿಕ ಶಿಕ್ಷಕಿಯಾಗಿ 15 ವರ್ಷಗಳ ಕೆಲಸ ಮಾಡುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ 50 ಲಕ್ಷ ಹಣ ಹೊಂದಿಸುವ ಸಲುವಾಗಿ ನಮ್ಮ ಸಂಬಂಧಿಕರ ಜೊತೆ ಇಸ್ರೇಲ್ಗೆ ತೆರಳಿದ್ದರು. ಯುದ್ಧ ಆರಂಭವಾದಾಗ ತುಂಬಾ ಭಯ ಆಗಿತ್ತು. ಹೀಲ್ಡಾ ನಮ್ಮೊಂದಿಗೆ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದಾರೆ. ಏನೂ ಸಮಸ್ಯೆ ಇಲ್ಲ ಎಂದಿದ್ದಾರೆ. ಪತ್ನಿ ಇರುವ ಪ್ರದೇಶದಲ್ಲಿ ಬಸ್, ಕಾರ್ ಹಾಗೂ ಇತರ ವಾಹನಗಳು ಸಂಚರಿಸುತ್ತಿವೆ. ಅಂಗಡಿಗಳು, ಮಾಲ್ಗಳು ತೆರೆದಿವೆ ಎಂದು ಹೀಲ್ಡಾ ತಿಳಿಸಿದ್ದಾರೆ'' ಎಂದು ಅಮ್ರೋಸ್ ಹೇಳಿದರು.
ಇದನ್ನೂ ಓದಿ: ಹಮಾಸ್ ದಾಳಿಯಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡ ನಟಿ ಮಧುರಾ ನಾಯ್ಕ್: ಭಾವನಾತ್ಮಕ ವಿಡಿಯೋ ಹಂಚಿಕೊಂಡ ಮಾಡೆಲ್