ದಾವಣಗೆರೆ: ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯ ನಕಲಿ ಪಾಲಿಸಿಯನ್ನು ಬೈಕ್ ಸವಾರರೊಬ್ಬರಿಗೆ ಮಾಡಿಸಿಕೊಟ್ಟ ಆರೋಪಿಯನ್ನು ಜಿಲ್ಲೆಯ ಮಾಯಕೊಂಡ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ತಾಲೂಕಿನ ಬಾಡಾ ಗ್ರಾಮದಲ್ಲಿ ಕಂಪ್ಯೂಟರ್ ಸೆಂಟರ್ ಅಂಗಡಿ ನಡೆಸುತ್ತಿದ್ದ ಪ್ರವೀಣ್ ಎಂಬಾತ ಸಿಕ್ಕಿಬಿದ್ದಿರುವ ಆರೋಪಿ. ಈತ ಚನ್ನಗಿರಿ ತಾಲೂಕಿನ ಮರಡಿ ಗ್ರಾಮದವನು. ಅದೇ ಗ್ರಾಮದ ಮಂಜುನಾಥ್ ಎಂಬುರಿಂದ 1463 ರೂಪಾಯಿ ಪಡೆದು ಬೇರೆ ಬೈಕ್ ನ ಪಾಲಿಸಿ ಕಾಪಿಯಲ್ಲಿ ಮಂಜುನಾಥ್ ಅವರ ವಿಳಾಸ, ಬೈಕ್ ಸಂಖ್ಯೆ, ಇಂಜಿನ್, ಚೆಸ್ಸಿ ನಂಬರ್ ಗಳನ್ನು ಬದಲಾವಣೆ ಮಾಡಿ ನಕಲಿ ದಾಖಲೆ ಸೃಷ್ಟಿಸಿದ್ದ ಎನ್ನಲಾಗ್ತಿದೆ.
ಮಂಜುನಾಥನ ಬೈಕ್ ಅಪಘಾತವಾಗಿ ನುಜ್ಜುಗುಜ್ಜಾದ ಕಾರಣ ಪಾಲಿಸಿಯ ಹಣ ಪಡೆಯಲು ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ ಪಾಲಿಸಿ ಬೇರೊಬ್ಬರ ಹೆಸರಿನಲ್ಲಿ ಇದ್ದದ್ದು ಬೆಳಕಿಗೆ ಬಂದಿದೆ.
ಈ ಸಂಬಂಧ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯ ವಿಭಾಗೀಯ ವ್ಯವಸ್ಥಾಪಕ ಮಧುಸೂದನ್ ಅವರು ಮಾಯಕೊಂಡ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.