ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಕರ್ನಾಟಕ ರಾಜ್ಯ ಕೇಂದ್ರ ಬಿಂದು. ದಾವಣಗೆರೆ ಮಾರ್ಗ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಣೆ ಮಾಡಿದ್ದ ನೂತನ ರೈಲು ಮಾರ್ಗಗಳು ನನೆಗುದ್ದಿಗೆ ಬಿದ್ದಿದೆ.
ದಾವಣಗೆರೆ, ಚಿತ್ರದುರ್ಗ, ತುಮಕೂರು ನೇರ ರೈಲು ಮಾರ್ಗ ಘೋಷಣೆಯಾಗಿ ವರ್ಷಗಳೇ ಉರುಳಿದರೂ, ನೇರ ಮಾರ್ಗ ನಿರ್ಮಾಣ ಮಾಡಲು ರೈತರು ಭೂಮಿ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ದಾವಣಗೆರೆಯ ಭಾಗಶಃ ರೈತರು ತಮ್ಮ ಭೂಮಿಯನ್ನು ನೇರ ರೈಲು ಮಾರ್ಗ ನಿರ್ಮಾಣ ಮಾಡಲು ಬಿಟ್ಟುಕೊಟ್ಟಿದ್ದಾರೆ. ಆದರೆ, ಚಿತ್ರದುರ್ಗ ಹಾಗೂ ತುಮಕೂರು ಭಾಗದಲ್ಲಿ ರೈತರು ತಮ್ಮ ಜಮೀನು ಬಿಟ್ಟುಕೊಡದೇ ಇರಲು ನಿರ್ಧಾರ ಮಾಡಿದ್ದು, ಜಿಲ್ಲಾಡಳಿತ ಹಾಗೂ ರೈತರ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ಇನ್ನು ನೇರ ರೈಲು ಮಾರ್ಗ 2010ರಲ್ಲಿ ಘೋಷಣೆಯಾಗಿದ್ದು, ಇದರ ಕಾಮಗಾರಿ ವೆಚ್ಚವನ್ನು ಹಂತ ಹಂತವಾಗಿ ಕೇಂದ್ರ - ರಾಜ್ಯ ಸರ್ಕಾರಗಳೆರಡು ಭರಿಸಲಿವೆ. ಇನ್ನು ಆರಂಭದಲ್ಲಿ ಈ ನೇರ ರೈಲು ಮಾರ್ಗಕ್ಕೆ 2010ರಲ್ಲಿ 9 ರಿಂದ 12 ಕೋಟಿ ಅನುದಾನ ನೀಡಲಾಗಿತ್ತು. ಬಳಿಕ ಹಂತ ಹಂತವಾಗಿ ಈ ಕಾಮಗಾರಿಗೆ ಅನುದಾನ ದೊರೆತು, ಯೋಜನೆ ಘೋಷಣೆಯಾಗಿ ಹತ್ತು ವರ್ಷಗಳೇ ಕಳೆದಿದೆ.
ದಾವಣಗೆರೆ, ಚಿತ್ರದುರ್ಗ, ತುಮಕೂರು, ನೇರ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡರೆ ದಾವಣಗೆರೆಯಿಂದ ಬೆಂಗಳೂರು ತಲುಪಲು ಕೇವಲ 260 ಕಿಮೀ ಮಾತ್ರ ಸಾಕು. ಇನ್ನು ಚಿತ್ರದುರ್ಗ, ತುಮಕೂರು, ಶಿರಾದಲ್ಲಿ ಪ್ರವಾಸಿ ಸ್ಥಳಗಳಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹಾಗೂ ಪ್ರವಾಸೋದ್ಯಮಕ್ಕು ಹೆಚ್ಚು ಅನುಕೂಲ ಆಗಲಿದೆ.
ನನೆಗುದ್ದಿಗೆ ಬಿದ್ದಿದೆ ಹರಿಹರ ಟು ಶಿವಮೊಗ್ಗ ರೈಲು ಮಾರ್ಗ: ಇನ್ನು ಸದಾನಂದ ಗೌಡರವರು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಹರಿಹರ, ಶಿವಮೊಗ್ಗ ರೈಲ್ವೆ ಮಾರ್ಗ ಯೋಜನೆ ಘೋಷಣೆ ಮಾಡಿದ್ದರು. ಆದರೆ ಇಂದಿಗೂ ಸರ್ವೇ ನಡೆಯುತ್ತಿದೆಯೇ ಹೊರತು ಯಾವುದೇ ಕಾಮಗಾರಿ ಆಗಿಲ್ಲ. ಇನ್ನು ಈ ಕಾಮಗಾರಿಗೆ ರೈಲ್ವೆ ಪಿಂಕ್ ಬುಕ್ನಲ್ಲಿ ಪ್ರತಿ ವರ್ಷ ಹತ್ತು ಲಕ್ಷ ಅನುದಾನ ಮೀಸಲಿಡುತ್ತಿದ್ದು, ಇಲ್ಲಿ ತನಕ ಯಾವುದೇ ಕಾಮಗಾರಿ ಆರಂಭ ಆಗಿಲ್ಲ.
ಇನ್ನು ದಾವಣಗೆರೆ - ಹುಬ್ಬಳ್ಳಿ ಮತ್ತು ಬೆಂಗಳೂರು ದ್ವಿಮುಖ ರೈಲ್ವೆ ಮಾರ್ಗಕ್ಕೆ ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ಬಳಿ 12 ಕಿಮೀ ಕಾಮಗಾರಿ ಬಾಕಿ ಇದ್ದು, ತೊಳಹುಣಸೆಯಿಂದ ತುಮಕೂರು ತನಕ,ದಾವಣಗೆರೆಯಿಂದ ಹಾವೇರಿವರೆಗೂ ದ್ವಿಮುಖ ರೈಲ್ವೆ ಮಾರ್ಗ ಕಾಮಗಾರಿ ಮುಂದುವರೆದಿದೆ.