ದಾವಣಗೆರೆ : ನೂತನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಿಗೆ ತಡವಾಗಿ ಬರುತ್ತಿದ್ದ ನೌಕರರಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಕಚೇರಿಗೆ ದಿಢೀರ್ ಭೇಟಿ ನೀಡಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಜಿಲ್ಲೆಯಯಲ್ಲಿ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಾತ್ವಾಕಾಂಕ್ಷಿ ಯೋಜನೆ ಅನುಷ್ಟಾನಕ್ಕೆ ಎಷ್ಟೇ ಹೋರಾಟ ನಡೆಸಿದರೂ ಇದುವರೆಗೂ ಸಾಕಾರಗೊಂಡಿಲ್ಲ. ಇದೀಗ ಹೊಸ ಜಿಲ್ಲಾಧಿಕಾರಿ ಆಗಮನ ಜನರಲ್ಲಿ ಆಶಾಭಾವ ಮೂಡಿಸಿದೆ.
ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿ ಸುಮಾರು 4 ವರ್ಷ ಪೂರೈಸುತ್ತ ಬಂದಿದೆ. ಆದರೆ, ದಾವಣಗೆರೆ ಮಾತ್ರ ಇನ್ನೂ ಸ್ಮಾರ್ಟ್ ಆದಂತೆ ಕಾಣುತ್ತಿಲ್ಲ. ಈ ಮಧ್ಯೆ ದಾವಣಗೆರೆಯ ಅಶೋಕ ಚಿತ್ರಮಂದಿರದ ಬಳಿಯಿರುವ ರೈಲ್ವೆ ಬ್ರಿಡ್ಜ್ ಕಾಮಗಾರಿ ಅನೇಕ ವರ್ಷಗಳಿಂದ ಹಾಗೆಯೇ ಉಳಿದಿದೆ. ಇಲ್ಲಿ ರೈಲ್ವೆ ಸೇತುವೆ ಇಲ್ಲದಿರುವುದರಿಂದ ನಗರದ ಉತ್ತರದಿಂದ ದಕ್ಷಿಣಕ್ಕೆ, ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಓಡಾಟ ನಿತ್ಯವೂ ನರಕಯಾತನೆಯಾಗಿದೆ.
ಈ ಪಡಿಪಾಟಲು ತಪ್ಪಿಸುವ ಉದ್ದೇಶದಿಂದ ಇಲ್ಲೊಂದು ಸೇತುವೆ ನಿರ್ಮಿಸಿ ಎಂದು ಕಳೆದ 30 ವರ್ಷಗಳಿಂದ ದಾವಣಗೆರೆಯ ವಿವಿಧ ಸಂಘಟನೆಗಳು ಹಾಗೂ ಜನರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ, ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಇಂದಿಗೂ ಕೂಡ ಸೇತುವೆ ನಿರ್ಮಾಣ ಸಾಧ್ಯವಾಗಿಲ್ಲ ಅಂತಾರೆ ಸಾರ್ವಜನಿಕರು.
ಜಿಲ್ಲಾಧಿಕಾರಿ ಪ್ರತಿಕ್ರಿಯೆ ಏನು?
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನಗರದ ಹತ್ತು ಹಲವು ಸಮಸ್ಯೆಗಳನ್ನ ಮನಗಂಡಿದ್ದು, ದಾವಣಗೆರೆ ಹಳೆಯ ಬ್ರಿಡ್ಜ್ ಹಾಗೂ ಕೆಲವು ಅವೈಜ್ಞಾನಿಕ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ. ಈ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಜನರಿಗೆ ಭರವಸೆ ನೀಡಿದ್ದಾರೆ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿಯೇ ಕೆಲಸ ಮಾಡುತ್ತೇನೆ. ನನಗೆ ನಿಮ್ಮ ಸಹಕಾರ ಬೇಕು,ಇಷ್ಟು ದಿನ ಕಾದಿದ್ದೀರಿ, ಇನ್ನು ಸ್ವಲ್ಪ ದಿನ ಕಾಯುವಂತವರಾಗಿ, ಕಡಿಮೆ ವೆಚ್ಚದಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ರು.