ದಾವಣಗೆರೆ: ಎರಡನೇ ಅವಧಿಗೆ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯಲು ಕೈ - ಕಮಲ ಪಕ್ಷಗಳ ನಡುವೆ ಹಗ್ಗ ಜಗ್ಗಾಟ ಆರಂಭವಾಗಿದೆ. ಫೆ.24ಕ್ಕೆ ಮೇಯರ್ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ತಮಗೆ ಬೇಕಾದ ಜನಪ್ರತಿನಿಧಿಗಳ ಹೆಸರನ್ನು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಎರಡು ಪಕ್ಷದವರು ಸೇರಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ರೀತಿ ದಾವಣಗೆರೆಯ ಜನಪ್ರತಿನಿಧಿಗಳು ಬೇರೆ ಜಿಲ್ಲೆಯ ಜನ ಪ್ರತಿನಿಧಿಗಳಿಗೆ ತಮಗೆ ಬೇಕಾದಾಗ ಮತದಾರರ ಪಟ್ಟಿಸೇರಿಸುವ ಅಧಿಕಾರ ಯಾರು ನೀಡಿದರೂ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದ್ದೇ ತಡ ಮತದಾನ ಮಾಡಲು ಕೈ - ಕಮಲ ಪಕ್ಷದವರು ತಮಗೇ ಬೇಕಾದ ಜನ ಪ್ರತಿನಿಧಿಗಳನ್ನು ಕೆಲವೇ ಗಂಟೆಗಳಲ್ಲಿ ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ.
ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ವಿರೋಧ ಪಕ್ಷ ಕಾಂಗ್ರೆಸ್ ನವರು ವಿಧಾನ ಪರಿಷತ್ ಸದಸ್ಯರಾದ ಕೆ.ಸಿ ಕೊಂಡಯ್ಯ, ರಘು ಆಚಾರ್, ಹೆಚ್ಎಂ ರೇವಣ್ಣ, ಕೊಂಡಜ್ಜಿ ಮೋಹನ್ ಸೇರಿ ಒಟ್ಟು ನಾಲ್ಕು ಜನರನ್ನು ಮೇಯರ್ ಚುನಾವಣೆ ವೇಳೆ ಮತದಾನ ಮಾಡಲು ಅಕ್ರಮವಾಗಿ ರಾತ್ರೋರಾತ್ರಿ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆಂದು ಮೇಯರ್ ಅಜಯ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಇದಲ್ಲದೇ ಬಿಜೆಪಿಯವರು ಕೂಡ ಮೇಯರ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಅವರು ಕೂಡ ಕೆಲ ಪ್ರತಿನಿಧಿಗಳನ್ನು ರಾತ್ರೋರಾತ್ರಿ ಸೇರಿಸಿರುವುದು ಜಗಜ್ಜಾಹೀರಾಗಿದೆ. ರಾಣೆಬೆನ್ನೂರಿನ ವಿಧಾನ ಪರಿಷತ್ ಸದಸ್ಯ ಹಾಗೂ ತೋಟಗಾರಿಕೆ ಸಚಿವ ಆರ್ ಶಂಕರ್, ಹಾಗೂ ಚಿದಾನಂದ್ ಗೌಡರನ್ನು ಮೇಯರ್ ಚುನಾವಣೆಗಾಗಿಯೇ ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು ಕೈ ಪಕ್ಷದ ಕಾರ್ಯಕರ್ತರನ್ನು ಆಕ್ರೋಶಕ್ಕೀಡುಮಾಡಿದೆ.
ಪಾಲಿಕೆಯ ಒಟ್ಟು ಬಲಾಬಲ..!
ನಾಲ್ವರು ಪಕ್ಷೇತರ ಅಭ್ಯರ್ಥಿ ಸೇರಿ ಬಿಜೆಪಿ 21, ಓರ್ವ ಅಭ್ಯರ್ಥಿ ರಾಜೀನಾಮೆ ಬಳಿಕ ಕಾಂಗ್ರೆಸ್ 21 ಸ್ಥಾನಕ್ಕೆ ಕುಸಿದಿತ್ತು, ಓರ್ವ ಜೆಡಿಎಸ್ ಮಹಿಳಾ ಅಭ್ಯರ್ಥಿ, ಓರ್ವ ಪಕ್ಷೇತರ, (ಕಾಂಗ್ರೆಸ್ ಬಂಡಾಯ) ಅಭ್ಯರ್ಥಿ ಇದ್ದಾರೆ, ಇದಕ್ಕೆ ಸೇರ್ಪಡೆಯಾಗಿ ಬಿಜೆಪಿ ಸಂಸದ, ಎಂಎಲ್ಎ, ಹಾಗೂ ಎಂಎಲ್ಸಿಗಳಾದ ಲೆಹರ್ ಸಿಂಗ್, ತೇಜಸ್ವಿನಿ ಗೌಡ, ಹನುಂತ್ ನಿರಾಣಿ, ರವಿಕುಮಾರ್, ಸೇರ್ಪಡೆ ಸೇರಿ ಒಟ್ಟು 10 ಮಂದಿ ಮತದಾನಕ್ಕೆ ಸೇರ್ಪಡೆಯಾಗಿ ಒಟ್ಟು 31 ಸ್ಥಾನ ಹೊಂದಿದ್ದು ಸುಲಭವಾಗಿ ಅಧಿಕಾರ ಹಿಡಿಯಲು ಬಿಜೆಪಿ ತಂತ್ರಗಾರಿಕೆ ಮಾಡಿದೆ. ಇನ್ನೂ ಕಾಂಗ್ರೆಸ್ 21 ಪಾಲಿಕೆ ಸದಸ್ಯರು, ಓರ್ವ ಶಾಸಕ, ಎಂಎಲ್ಸಿ ಓರ್ವ ಪಕ್ಷೇತರ ಅಥವಾ ಓರ್ವ ಜೆಡಿಎಸ್ ಸೇರಿದರು 27 ಸದಸ್ಯರು ಆಗುತ್ತಾರೆ, ಈ ಹಿನ್ನಲೆ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದ್ದು ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಹಿಡಿಯಲು ಹೊರಟಿದೆ ಎಂದು ಆರೋಪಿಸಿದೆ.
ಒಟ್ಟಿನಲ್ಲಿ ಬೆಣ್ಣೆನಗರಿ ಪಾಲಿಕೆ ಗದ್ದುಗೆ ಹಿಡಿಯಲು ತಮಗೆ ಬೇಕಾದ ರಾಜಕಾರಣಿಗಳ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುತ್ತಿರುವುದು ಜಗಜ್ಜಾಹೀರಾಗಿದೆ. ಇದು ಬೆಣ್ಣೆ ನಗರಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಮೇಯರ್ ಚುನಾವಣೆ ಮತದಾನಕ್ಕೂ ಮುನ್ನ ಇದರ ಸಂಬಂಧ ಚುನಾವಣೆ ಆಯೋಗ ಮಧ್ಯೆ ಪ್ರವೇಶಿಸಿ ಪರಿಶೀಲನೆ ನಡೆಸಬೇಕಾಗಿದೆ.