ದಾವಣಗೆರೆ: ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣ ಪ್ರಿಯತಮೆ ಕೊಂದ ಹಂತಕನಿಗೆ 1ನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಅಣ್ಣಪ್ಪ ಶಿಕ್ಷೆಗೆ ಗುರಿಯಾದ ಅಪರಾಧಿ. ಕೆರೆಬಿಳಚಿ ಗ್ರಾಮದ ಸವಿತಾ ಮತ್ತು ಅಣ್ಣಪ್ಪ ಪ್ರೀತಿಸುತ್ತಿದ್ದರು. ಆದರೆ, ಮನೆಯವರ ಮುಲಾಜಿಗೆ ಬಿದ್ದು ಇಬ್ಬರೂ ಬೇರೆ, ಬೇರೆ ಮದುವೆ ಆಗಿದ್ದರೂ ಸಹ ಸಂಪರ್ಕದಲ್ಲಿದ್ದರು.
ಹೊಸ ವರ್ಷದ ದಿನ ಸಿಹಿ ತಿಂಡಿ ತೆಗೆದುಕೊಂಡು ಅಣ್ಣಪ್ಪ ಸವಿತಾಳ ಊರಾದ ಮಾಡಾಳು ಸಮೀಪದ ಚನ್ನೇಶಪುರ ಗ್ರಾಮಕ್ಕೆ ಹೋಗಿದ್ದಾನೆ. ಸವಿತಾಳ ಪತಿ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆ ಲೈಂಗಿಕ ಕ್ರಿಯೆಗೆ ಸವಿತಾಳನ್ನು ಒತ್ತಾಯಿಸಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದನು.
ಚನ್ನಗಿರಿ ಸರ್ಕಲ್ ಇನ್ ಸ್ಪೆಕ್ಟರ್ ಆರ್.ಆರ್. ಪಾಟೀಲ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ
ನ್ಯಾಯಾಧೀಶ ಕೆಂಗಬಾಲಯ್ಯ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಮೃತಳ ಪುತ್ರಿಗೆ ₹10 ಸಾವಿರ ನೀಡಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದರು.